ಬೆಂಗಳೂರು :  ‘ಗಜ’ ಚಂಡಮಾರುತದ ಪ್ರಭಾವದಿಂದ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಗುಡುಗು ಸಿಡಿಲು ಸಹಿತ ವ್ಯಾಪಕ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಕೇರಳ ಮತ್ತು ತಮಿಳುನಾಡಿನಲ್ಲಿ ಅಬ್ಬರಿಸಿದ ಗಜ ಚಂಡಮಾರುತ ಇದೀಗ ತನ್ನ ಪ್ರಭಾವವನ್ನು ರಾಜ್ಯದ ಉತ್ತರ ಹಾಗೂ ಕರಾವಳಿ ಭಾಗದಲ್ಲಿ ಬೀರಿದ್ದು, ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಶನಿವಾರ ಭೂ ಭಾಗದಿಂದ ಅರಬ್ಬಿ ಸಮುದ್ರದಲ್ಲಿ ಚಲಿಸುತ್ತಿರುವ ಚಂಡಮಾರುತದಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಿದೆ. ಇನ್ನೂ ಎರಡು ದಿನ ಚಂಡಮಾರುತದ ಪ್ರಭಾವದಿಂದ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಿಡಿಲು ಎಚ್ಚರಿಕೆ:

ಭಾನುವಾರ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಿಡಿಲು ಅಬ್ಬರ ಹೆಚ್ಚಾಗಿರುವುದರಿಂದ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಾರ್ವಜನಿಕರಿಗೆ ಕರ್ನಾಟಕ ರಾಜ್ಯವಿಪತ್ತು ನಿರ್ವಹಣಾ ಕೇಂದ್ರ ಸೂಚನೆ ನೀಡಿತ್ತು. ಇನ್ನು ಕರಾವಳಿ ಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮತ್ತೆ ವಾಯುಭಾರ ಕುಸಿತ:

ಗಜ ಚಂಡಮಾರುತ ಪ್ರಭಾವ ತಗ್ಗುತ್ತಿದ್ದಂತೆ ಬಂಗಾಳಕೊಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದೆ. ನ.19 ಮತ್ತು 20ರ ನಂತರ ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿ ಮೂಲಕ ಭೂ ಭಾಗವನ್ನು ಪ್ರವೇಶಿಸಲಿದೆ. ನ.23 ರ ವೇಳೆ ರಾಜ್ಯದಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಉಡುಪಿಯಲ್ಲಿ ಅತಿ ಹೆಚ್ಚು ಮಳೆ:

ಭಾನುವಾರ ರಾತ್ರಿ 9 ಗಂಟೆ ವೇಳೆ ಉಡುಪಿ ಜಿಲ್ಲೆಯಲ್ಲಿ 147 ಮಿ.ಮೀ. ಮಳೆಯಾದ ವರದಿಯಾಗಿದ್ದು, ಉಳಿದಂತೆ ಚಿತ್ರದುರ್ಗ 77.4, ಶಿವಮೊಗ್ಗ 77.2, ದಕ್ಷಿಣ ಕನ್ನಡ 52, ಉತ್ತರ ಕನ್ನಡ 41,ಬೆಳಗಾವಿ 37, ಹಾವೇರಿ 36, ತುಮಕೂರು 33.8, ಹಾಸನ 33.5, ರಾಯಚೂರು 32.5, ಧಾರವಾಡ 30, ಗದಗ 25 ಹಾಗೂ ಬಳ್ಳಾರಿ 20.8 ಮಿ.ಮೀ.ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಭಾನುವಾರ ರಾಜ್ಯದ ಹಲವು ಭಾಗದಲ್ಲಿ ಸಿಡಿಲಿನ ಅಬ್ಬರ ಹೆಚ್ಚಾಗಿದೆ. ಈ ಬಗ್ಗೆ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಸಾರ್ವಜನಿಕರು ಕೆಎಸ್‌ಎನ್‌ಡಿಎಂಸಿಯ ಸಿಡಿಲು ಆ್ಯಪ್‌ ಬಳಕೆ ಮಾಡುವ ಮೂಲಕ ಸಿಡಿಲು, ಮಿಂಚು, ಮಳೆಯ ಮುನ್ನೆಚ್ಚರಿಕೆ ಸಂದೇಶಗಳನ್ನು ಪಡೆದು ಸುರಕ್ಷಿತ ಪ್ರದೇಶಗಳಿಗೆ ತೆರಳಬಹುದು.

- ಶ್ರೀನಿವಾಸ ರೆಡ್ಡಿ, ನಿರ್ದೇಶಕ, ಕೆಎಸ್‌ಎನ್‌ಡಿಎಂಸಿ