ದುಬೈ (ಜ. 14): ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನವ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದೀಗ ಉಲ್ಟಾ ಹೊಡೆದಿದ್ದಾರೆ.

‘ಶಬರಿಮಲೆ ವಿಚಾರದಲ್ಲಿ ಸಂಪ್ರದಾಯ ಪಾಲನೆ ಆಗಬೇಕು ಎಂಬ ನಂಬಿಕೆ ನನ್ನದು. ಮಹಿಳೆಯರು ದೇವಾಲಯ ಪ್ರವೇಶಿಸಬೇಕು ಎಂಬವಾದದಲ್ಲೂ ಅರ್ಥವಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧ ಅಭಿಪ್ರಾಯ ಕೇಳಿದ ವೇಳೆ ಮಾತನಾಡಿದ ರಾಹುಲ್, ‘ಎರಡೂ ಕಡೆಯ ವಾದವನ್ನು ನಾನು ಆಲಿಸಿದ್ದೇನೆ. ಕೇರಳದ ಜನರ ವಾದ ಆಲಿಸಿದ ಬಳಿಕ, ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಸಂಪ್ರದಾಯ ಪಾಲಿಸಬೇಕು ಎಂಬ ವಾದದಲ್ಲೂ ಹುರುಳಿದೆ ಎಂದು ನನಗೆ ಇದೀಗ ಅನ್ನಿಸುತ್ತಿದೆ. ಅದೇ ರೀತಿ ಮಹಿಳೆಯರಿಗೂ ಸಮಾನ ಹಕ್ಕು ಬೇಕು ಎಂಬ ವಾದದಲ್ಲೂ ಹುರುಳಿರುವುದನ್ನು ಕಾಣಬಹುದು.

ಒಟ್ಟಾರೆ ಎರಡೂ ಪಕ್ಷಗಾರರ ವಾದದಲ್ಲಿ ಹುರುಳಿದೆ ಎಂದು ನನಗೆ ಅನ್ನಿಸುತ್ತದೆ’ ಎಂದರು. ಈ ಹಿಂದೆ ಅಕ್ಟೋಬರ್‌ನಲ್ಲಿ ಮಾತನಾಡಿದ್ದ ರಾಹುಲ್, ‘ಸುಪ್ರೀಂ ಕೋರ್ಟ್ ಆದೇಶಾನುಸಾರ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬೇಕು’ ಎಂದಿದ್ದರು. ಆದರೆ ಅವರ ಕಾಂಗ್ರೆಸ್ ಪಕ್ಷದ ಕೇರಳ ಘಟಕವು ಮಹಿಳಾ ಪ್ರವೇಶವನ್ನು ವಿರೋಧಿಸುತ್ತಿದೆ. ಜೊತೆಗೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಕೇರಳ ಸರ್ಕಾರದ ವಿರುದ್ಧ ನಡೆಸಿದ ರಾಜ್ಯವ್ಯಾಪಿ ಹೋರಾಟದಲ್ಲೂ ಕಾಂಗ್ರೆಸ್ ಸಕ್ರಿಯವಾಗಿ ಭಾಗಿಯಾಗಿತ್ತು.