ನವದೆಹಲಿ (ಏ. 24): ‘ದೇಶಕ್ಕೆ ಬೆಂಕಿ ಬೀಳಲಿ, ಬಾಲಕಿಯರ ಮೇಲೆ ಅತ್ಯಾಚಾರ ನಡೆಯಲಿ ಮತ್ತು ದಲಿತರು-ಅಲ್ಪಸಂಖ್ಯಾತರಿಗೆ ಬೆದರಿಕೆ ಇರಲಿ... ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇವೆಲ್ಲ ಲೆಕ್ಕಕ್ಕಿಲ್ಲ. ಮತ್ತೆ ಪ್ರಧಾನಮಂತ್ರಿ ಆಗುವುದೊಂದೇ ಅವರ ಕನಸು’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀಕ್ಷ್ಣ  ವಾಗ್ದಾಳಿ ನಡೆಸಿದ್ದಾರೆ.

‘ಸಂವಿಧಾನ ಉಳಿಸಿ’ ಎಂಬ ಕಾಂಗ್ರೆಸ್‌ ಪಕ್ಷದ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಿದ ರಾಹುಲ್‌, ‘ಮೋದಿ ಸರ್ಕಾರದ ಅಧೀನದಲ್ಲಿ ಸಾಂವಿಧಾನಿಕ ಮೌಲ್ಯಗಳು ಅಪಾಯದಲ್ಲಿವೆ. ಆದರೆ ಇದಕ್ಕೆ ಕಾಂಗ್ರೆಸ್‌ ಪಕ್ಷವು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನಂಥ ಸಂಸ್ಥೆಯನ್ನೇ ದಮನ ಮಾಡಲಾಗುತ್ತಿದೆ. ಸಂಸತ್ತಿಗೆ ಸರ್ಕಾರ ಬೀಗ ಹಾಕಿಬಿಟ್ಟಿದೆ. ನನಗೆ ಲೋಕಸಭೆಯಲ್ಲಿ ನೀರವ್‌ ಮೋದಿ ವಿವಾದ ಸೇರಿದಂತೆ ಯಾವುದೇ ವಿಷಯದ ಬಗ್ಗೆ 15 ನಿಮಿಷ ಕಾಲ ಮಾತನಾಡಲು ಬಿಟ್ಟಿದ್ದರೆ ಮೋದಿ ಓಡಿಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಆರೆಸ್ಸೆಸ್‌ ಚಿಂತನೆಯನ್ನು ಹೊಂದಿದ ವ್ಯಕ್ತಿಗಳಿಗೆ ಸರ್ಕಾರಿ ಸಂಸ್ಥೆಗಳ ಜವಾಬ್ದಾರಿ ಕೊಡಲಾಗುತ್ತಿದೆ. ಮೋದಿ ಅವರೇ ಹೇಳಿಕೊಂಡಂತೆ ದಲಿತರು ಮಾಡುವ ಕೆಲಸದಲ್ಲಿ ಅವರಿಗೆ ಆಧ್ಯಾತ್ಮಿಕತೆ ಕಾಣುತ್ತಿದೆಯಂತೆ. ಆದರೆ ದಲಿತರಿಗೆ ಮೋದಿ ಹೃದಯದಲ್ಲಿ ಸ್ಥಾನವಿಲ್ಲ. ಮಹಿಳೆಯರಿಗೆ ಸ್ಥಾನವಿಲ್ಲ ಎಂದು ರಾಹುಲ್‌ ಆರೋಪಿಸಿದರು.

ಮೋದಿ ಇನ್ನು ಮುಂದೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಕೇಳಲು ಹೊಸ ಹೊಸ ಭರವಸೆ ನೀಡಲು ಆರಂಭಿಸಲಿದ್ದಾರೆ. ಆದರೆ ಉದ್ಯೋಗ ಸೃಷ್ಟಿಯಂಥ ಹಿಂದಿನ ಭರವಸೆಗಳನ್ನೇ ಅವರು ಈಡೇರಿಸಿಲ್ಲ. ಬೇಟಿ ಬಚಾವೋ, ಬೇಟಿ ಪಢಾವೋ ಎಂಬ ಬಿಜೆಪಿ ಘೋಷಣೆಯು ಇಂದು ಕೇವಲ ‘ಬೇಟಿ ಬಚಾವೋ’ ಎಂದು ಬದಲಾಗಿದೆ ಎಂದು ಇತ್ತೀಚಿನ ಗ್ಯಾಂಗ್‌ರೇಪ್‌ ಪ್ರಕರಣಗಳನ್ನು ಉಲ್ಲೇಖಿಸಿ ಹೇಳಿದರು.

ಮುಂದಿನ ಚುನಾವಣೆಯಲ್ಲಿ ಜನರೇ ‘ಮನ್‌ ಕೀ ಬಾತ್‌’ ಹೇಳಲಿದ್ದಾರೆ. ಕೇವಲ ಕಾಂಗ್ರೆಸ್‌ಗೆ ಮಾತ್ರ ಎಲ್ಲ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಇದೆ ಎಂದು ರಾಹುಲ್‌ ನುಡಿದರು.

ಶಾ ತಿರುಗೇಟು:

ರಾಹುಲ್‌ ಗಾಂಧಿ ಅವರ ‘ಸಂವಿಧಾನ ಉಳಿಸಿ’ ಆಂದೋಲನದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವ್ಯಂಗ್ಯವಾಡಿ, ‘ಇದರ ಉದ್ದೇಶ ಸಂವಿಧಾನ ಉಳಿಸಿ ಅಲ್ಲ. ವಂಶಪಾರಂಪರ್ಯ ಉಳಿಸಿ ಎಂದಾಗಿದೆ. ಕಾಂಗ್ರೆಸ್‌ನ ಮೋದಿ ದ್ವೇಷವು ಈಗ ಭಾರತ ದ್ವೇಷಕ್ಕೆ ತಿರುಗಿದೆ’ ಎಂದಿದ್ದಾರೆ.

ಏನೀ ಆಂದೋಲನ?

2019ರ ಲೋಕಸಭಾ ಚುನಾವಣೆಗೂ ಮುನ್ನ ದಲಿತರ ಜೊತೆಗಿನ ಸಂಪರ್ಕಕ್ಕಾಗಿ ಬಿಜೆಪಿ ಇತ್ತೀಚೆಗೆ ಗ್ರಾಮ ಸ್ವರಾಜ್‌ ಅಭಿಯಾನ ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌, ಸಂವಿಧಾನ ರಕ್ಷಿಸಿ ಆಂದೋಲನ ಆರಂಭಿಸಿದೆ. ಸೋಮವಾರ ನಡೆದ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಎಲ್ಲ ರಾಜ್ಯಗಳ ಹಾಲಿ ಮತ್ತು ಮಾಜಿ ದಲಿತ ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್‌ ಸದಸ್ಯರು, ಸ್ಥಳೀಯ ಸಂಸ್ಥೆ ಹಾಗೂ ಪಂಚಾಯತಿ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು. ಇವರೆಲ್ಲಾ ದೇಶದಲ್ಲಿ ಬಿಜೆಪಿ ಆಳ್ವಿಕೆಯಡಿ ದಲಿತ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಂವಿಧಾನ ಕೂಡ ಅಪಾಯದಲ್ಲಿದ್ದು, ದಲಿತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಕ್ಕಿರುವ ಮೀಸಲಾತಿಯನ್ನು ಕಿತ್ತುಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ನಡೆಸಲಿದ್ದಾರೆ.