ನವದೆಹಲಿ (ಜ. 14): ರಾಹುಲ್ ಗಾಂಧಿ ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೈಟ್ಸ್ ಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಸುಳ್ಳುಸುದ್ದಿಗಳು ಹರಿದಾಡುತ್ತಿವೆ. ಸದ್ಯ ರಾಹುಲ್  ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರತಿ ಬಸ್, ಮಾಲ್‌ಗಳಲ್ಲೂ ರಾಹುಲ್ ಗಾಂಧಿ ಪೋಸ್ಟರ್ ಹಾಕಲಾಗಿತ್ತು ಎಂಬ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹರಿಯಾಣ ಪ್ರದೇಶ ಕಾಂಗ್ರೆಸ್ ಕಮಿಟಿ ಜನರಲ್ ಸೆಕ್ರೆಟರಿ ಲಲಿತ್ ನಾಗರ್ ಮೊದಲಿಗೆ ಈ ಫೋಟೋಗಳನ್ನು ಟ್ವೀಟ್ ಮಾಡಿದ್ದರು. ಅನಂತರದಲ್ಲಿ ಇದು ವೈರಲ್ ಆಗಿದೆ. ಆದರೆ ನಿಜಕ್ಕೂ ಯುಎಇಯ ಬಸ್, ಮಾಲ್‌ಗಳಲ್ಲಿ ರಾಹುಲ್ ಗಾಂಧಿ ಫೋಟೋದ ಪೋಸ್ಟರ್ ಹಾಕಲಾಗಿತ್ತೇ ಎಂದು ಪರಿಶೀಲಿಸಿದಾಗ ಈ ಎಲ್ಲಾ ಫೋಟೋಗಳು ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ ಫೋಟೋಗಳು ಎಂದು ತಿಳಿದುಬಂದಿದೆ.

ಟಠಿಟ್ಛ್ಠ್ಞಜಿಎಂಬ ಫೋಟೋ ಎಡಿಟಿಂಗ್ ವೆಬ್‌ಸೈಟ್‌ನಲ್ಲಿ ಈ ರೀತಿಯ ಸಾವಿರಾರು ಟೆಂಪ್ಲೇಟ್ಸ್‌ಗಳಿವೆ. ಈ ಫೋಟೋಗಳಲ್ಲಿ ‘ಬಿಲ್‌ಬೋರ್ಡ್’ ಎಂಬ ಟೆಂಪ್ಲೇಟ್ ಬಳಸಿ ರಾಹುಲ್ ಗಾಂಧಿ ಫೋಟೋವನ್ನು ಎಡಿಟ್ ಮಾಡಲಾಗಿದೆ. ಇನ್ನು ಬಸ್ಗಳಲ್ಲಿ ಅಂಟಿಸಿರುವ ರಾಹುಲ್ ಗಾಂಧಿ ಫೋಟೋಗಳ ಹಿಂದಿನ ಸತ್ಯಾಸತ್ಯ ಏನು ಎಂದು ಪರಿಶೀಲಿಸಿದಾಗ ‘ದ ಪರ್ಪಲ್ ಜರ್ನಲ್’ ಎಂಬ ಬ್ಲಾಗ್‌ನಲ್ಲಿ ಮೂಲ ಫೋಟೋ ಪತ್ತೆಯಾಗಿದೆ.

ಅದರಲ್ಲಿ ರಾಹುಲ್ ಗಾಂಧಿ ಫೋಟೋ ಇರಲಿಲ್ಲ. ಅಲ್ಲಿಗೆ ಬಸ್ ಮತ್ತು ಮಾಲ್‌ಗಳಲ್ಲಿ ಇರುವ ಪೋಸ್ಟರ್‌ಗಳು ಫೋಟೋಶಾಪ್ ತಂತ್ರಜ್ಞಾನ ಬಳಸಿ ಎಡಿಟ್ ಮಾಡಿರುವ ಚಿತ್ರ ಎಂಬುದು ಸ್ಪಷ್ಟ. 

- ವೈರಲ್ ಚೆಕ್