ಪಣಜಿ(ಜ.29): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಕಚೇರಿಗೆ ತೆರಳಿ ಅವರ ಆರೋಗ್ಯ ವಿಚಾರಿಸಿದರು.

ನಿನ್ನೆಯಷ್ಟೇ ರಫೆಲ್ ಕಡತಗಳು ಪರಿಕ್ಕರ್ ಮನೆಯಲ್ಲಿದ್ದು, ಇದೇ ಕಾರಣಕ್ಕೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪ್ರಧಾನಿ ಮೋದಿ ಹಿಂದೇಟು ಹಾಕುತ್ತಿದ್ದಾರೆ ಎಂದು ರಾಹುಲ್ ಗಂಭೀರ ಆರೋಪ ಮಾಡಿದ್ದರು.

ಆದರೆ ಇಂದು ಪರಿಕ್ಕರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ರಾಹುಲ್, ಆರೋಗ್ಯ ವಿಚಾರಿಸಿದರು. ಈ ವೇಳೆ ರಫೆಲ್ ಕುರಿತು ಉಭಯ ನಾಯಕರ ಮಧ್ಯೆ ಮಾತುಕತೆ ಏನಾದರೂ ನಡೆದಿದೆಯೇ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಗೋವಾ ಸಚಿವ ವಿಶ್ವಜೀತ್ ರಾಣೆ ಮಾತನಾಡಿದ್ದಾರೆ ಎಂಬ ಆಡಿಯೋ ಟೇಪ್‌ನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಮನೆಯಲ್ಲಿದ್ದು, ಇದೇ ಕಾರಣಕ್ಕೆ ಅವರನ್ನು ಮುಟ್ಟಲು ಬಿಜೆಪಿ ಹೆದರುತ್ತಿದೆ ಎಂದು ಆರೋಪಿಸಿತ್ತು.