ಪುಣೆ :  ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ರೀತಿ ಹಾಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರ ಹತ್ಯೆಗೆ ಸಂಚು ರೂಪಿಸಲು ಯತ್ನಿಸಿದ, ಭೀಮಾ-ಕೋರೆಗಾಂವ್‌ ಗಲಭೆಗೆ ಪ್ರಚೋದಿಸಿದ ಮತ್ತು ಮಾವೋವಾದಿ ನಕ್ಸಲರ ಜತೆ ನಂಟು ಹೊಂದಿದ ಆರೋಪದಡಿ ಪುಣೆ ಪೊಲೀಸರಿಂದ ಬಂಧನವಾಗಿರುವ ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್‌ ಸೇರಿ ಐವರನ್ನು ಜೈಲಿನ ಬದಲು ಸೆ.6ರವರೆಗೆ ಗೃಹಬಂಧನದಲ್ಲಿ ಇರಿಸಲು ಸುಪ್ರೀಂಕೋರ್ಟ್‌ ಬುಧವಾರ ಅವಕಾಶ ನೀಡಿದೆ.

ಇನ್ನೊಂದೆಡೆ, ಬಂಧಿತ ಐವರಲ್ಲಿ ರಾವ್‌ ಸೇರಿದಂತೆ ಮೂವರನ್ನು ಪುಣೆಗೆ ಬುಧವಾರ ಕರೆತರಲಾಗಿತ್ತು. ಇವರನ್ನು ಕೂಡಲೇ ಅವರವರ ಮನೆಗೆ ಕಳಿಸುವಂತೆ ಪುಣೆ ನ್ಯಾಯಾಲಯ ಆದೇಶಿಸಿದೆ. ಇದರಿಂದಾಗಿ ಬಂಧಿತರನ್ನು ಜೈಲಿಗೆ ಅಟ್ಟುವ ಸರ್ಕಾರದ ಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಈ ವಿದ್ಯಮಾನಗಳ ನಡುವೆ ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಪ್ರಜಾಪ್ರಭುತ್ವದಲ್ಲಿ ಭಿನ್ನದನಿ ಎಂಬುದು ಸುರಕ್ಷತೆಯ ‘ಸೇಫ್ಟಿವಾಲ್‌್ವ’ ಇದ್ದಂತೆ. ಈ ‘ಸೇಫ್ಟಿವಾಲ್‌್ವ’ಗಳಿಗೆ ಅವಕಾಶ ನೀಡದೇ ಇದ್ದರೆ ಸ್ಫೋಟವಾಗುತ್ತದೆ’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಕೋರ್ಟ್‌ನ ಈ ಅನಿಸಿಕೆಗಳು ಸರ್ಕಾರಕ್ಕೆ ಮುಜುಗರ ಸೃಷ್ಟಿಸಿವೆ.

ನ್ಯಾಯಾಲಯಗಳ ಈ ಆದೇಶಗಳಿಂದ ವಿಚಾರವಾದಿಗಳು ನಿರಾಳರಾಗಿದ್ದು, ‘ಸುಪ್ರೀಂ ಕೋರ್ಟ್‌ ಶುಭ ಸುದ್ದಿ ಒದಗಿಸಿದೆ. ಇದು ರಾಜಕೀಯ ದುರುದ್ದೇಶದ ಕ್ರಮ ಎಂದು ಸಾಬೀತಾಗಿದೆ’ ಎಂದು ಹರ್ಷಿಸಿದ್ದಾರೆ.

ಆದರೆ, ಪೊಲೀಸರ ಕ್ರಮವು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ‘ಬಂಧನ ಪ್ರಕ್ರಿಯೆ ವೇಳೆ ನಿಯಮ ಪಾಲನೆ ಆಗಿಲ್ಲ’ ಎಂದು ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರಿಗೆ ನೋಟಿಸ್‌ ನೀಡಿದೆ. ಇದಕ್ಕೆ ಪುಣೆ ಪೊಲೀಸರು ತಿರುಗೇಟು ನೀಡಿದ್ದು, ‘ರಾಜಕೀಯ ಮುಖಂಡರ ಮೇಲೆ ದಾಳಿ ನಡೆಸುವ ಸಂಚು ನಡೆದಿತ್ತು ಎಂಬ ಖಚಿತ ಸುಳಿವಿನ ಮೇರೆಗೆ ಈ ಬಂಧನ ನಡೆಸಲಾಗಿದೆ’ ಎಂದು ಸಮರ್ಥಿಸಿದ್ದಾರೆ.

ಸುಪ್ರೀಂ ಗರಂ:  ‘ವಿಚಾರವಾದಿಗಳ ಬಂಧನ ಅಕ್ರಮವಾಗಿದ್ದು, ಅವರ ಬಂಧನಕ್ಕೆ ತಡೆ ನೀಡಬೇಕು. ಬಂಧಿತರು ಗೌರವಾನ್ವಿತ ನಾಗರಿಕರಾಗಿದ್ದು, ಮಧ್ಯಂತರ ಕ್ರಮವಾಗಿ ಅವರನ್ನು ಗೃಹಬಂಧನದಲ್ಲಿ ಇರಿಸಲು ಅವಕಾಶ ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಬಂಧಿತರ ಪರ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಮನವಿ ಮಾಡಿದರು. ಆದರೆ, ಬಂಧಿತರ ವಿರುದ್ಧ ಮಾವೋವಾದಿ ಸಂಚಿನ ಪುರಾವೆಗಳಿವೆ ಎಂದು ಸರ್ಕಾರದ ಪರ ವಕೀಲರು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, ‘ಪ್ರಜಾಪ್ರಭುತ್ವದಲ್ಲಿ ಭಿನ್ನದನಿ ಎಂಬುದು ಸುರಕ್ಷತೆಯ ‘ಸೇಫ್ಟಿವಾಲ್‌್ವ’ ಇದ್ದಂತೆ. ಈ ‘ಸೇಫ್ಟಿವಾಲ್‌್ವ’ಗಳಿಗೆ ಅವಕಾಶ ನೀಡದೇ ಇದ್ದರೆ ಸ್ಫೋಟವಾಗುತ್ತದೆ’ ಎಂದು ತೀಕ್ಷ$್ಣ ಅಭಿಪ್ರಾಯ ವ್ಯಕ್ತಪಡಿಸಿತು. ‘ಭೀಮಾ ಕೋರೆಗಾಂವ್‌ ಗಲಭೆ ಸಂಭವಿಸಿ 9 ತಿಂಗಳಾದ ನಂತರ ಇವರನ್ನು ಬಂಧಿಸುವ ಔಚಿತ್ಯವೇನಿತ್ತು?’ ಎಂದೂ ಕಟುವಾಗಿ ಸರ್ಕಾರವನ್ನು ಪ್ರಶ್ನಿಸಿ, ಇವರ ಬಂಧನದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿತು. ಮುಂದಿನ ವಿಚಾರಣೆಯನ್ನು ಸೆ.6ಕ್ಕೆ ನಿಗದಿಪಡಿಸಿತು.

ಸಾಮಾನ್ಯವಾಗಿ ಬಂಧಿತರನ್ನು ಪೊಲೀಸರ ವಶಕ್ಕೆ ಅಥವಾ ನ್ಯಾಯಾಂಗ ವಶಕ್ಕೆ ನೀಡಲಾಗುತ್ತದೆ. ನ್ಯಾಯಾಂಗ ವಶಕ್ಕೆ ನೀಡಿದರೆ ಜೈಲಿಗೆ ಕಳುಹಿಸಲಾಗುತ್ತದೆ. ಆದರೆ ಬಂಧಿತ ವರವರ ರಾವ್‌, ವರ್ನನ್‌ ಗೋನ್ಸಾಲ್ವಿಸ್‌, ಅರುಣ್‌ ಫೆರೀರಾ, ಸುಧಾ ಭಾರದ್ವಾಜ್‌, ಗೌತಮ್‌ ನವಲಖ ಅವರನ್ನು ನ್ಯಾಯಾಲಯ ಗೃಹ ಬಂಧನದಲ್ಲಿರಿಸಲು ಆದೇಶಿಸಿದೆ. ಹೀಗಾಗಿ ಇವರು ಜೈಲಿಗೆ ಹೋಗುವುದಿಲ್ಲ. ಪೊಲೀಸರ ನಿಗಾದಲ್ಲಿ ಮನೆಯಲ್ಲಿರುತ್ತಾರೆ.

ಈ ಐವರ ಪೈಕಿ ರಾವ್‌, ವರ್ನನ್‌ ಹಾಗೂ ಅರುಣ್‌ ಅವರನ್ನು ಈಗಾಗಲೇ ಪುಣೆ ಪೊಲೀಸರು ಪುಣೆಗೆ ಕರೆತಂದ್ದು, ಇವರನ್ನು ಶೀಘ್ರ ಅವರವರ ತವರಿಗೆ ಕಳಿಸಲಾಗುತ್ತದೆ. ಸುಧಾ ಭಾರದ್ವಾಜ್‌ ಹಾಗೂ ಗೌತಮ್‌ ನವಲಖ ಅವರು ಇನ್ನೂ ದಿಲ್ಲಿಯಲ್ಲೇ ಇದ್ದಾರೆ. ನವಲಖ ಅವರು ತಮ್ಮ ಬಂಧನ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಐವರು ಎಡಪಂಥೀಯರ ಬಂಧನದ ವಿರುದ್ಧ ಇತಿಹಾಸಕಾರ್ತಿ ರೋಮಿಲಾ ಥಾಪರ್‌, ಅರ್ಥಶಾಸ್ತ್ರಜ್ಞರಾದ ಪ್ರಭಾತ್‌ ಪಟ್ನಾಯಕ್‌, ದೇವಿಕಾ ಜೈನ್‌ ಸೇರಿದಂತೆ ಐವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ.