ಹಾಸನ :  ಅಪರಿಚಿತ ವ್ಯಕ್ತಿಯೊಬ್ಬ ವಸತಿ ನಿಲಯದ ಕಟ್ಟಡದ ಮೇಲೆ ಹೋಗಿ ಅಲ್ಲಿ ಒಣಗಲು ಹಾಕಿದ್ದ ವಿದ್ಯಾರ್ಥಿನಿಯರ ಉಡುಪುಗಳನ್ನು ಧರಿಸಿದ್ದಲ್ಲದೇ, ಪಕ್ಕದ ಮನೆಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಹಾಸನದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

 ನಗರದ ವಿದ್ಯಾನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡದ ಮೇಲೆ ಹೋದ ಅಪರಿಚಿತ ವ್ಯಕ್ತಿ, ವಿದ್ಯಾರ್ಥಿನಿಯರ ವಸತಿ ನಿಲಯದೊಳಗೆ ಮಧ್ಯರಾತ್ರಿ ಪ್ರವೇಶಿಸಿ, ಮಹಡಿಯ ಮೇಲೆ ಓಡಾಡಿದ್ದಾನೆ. 

ಅಲ್ಲದೇ, ವಿದ್ಯಾರ್ಥಿಯರ ಉಡುಪುಗಳನ್ನು ತೊಡಲು ಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ನಿಲಯದ ಪಕ್ಕದ ಸುನೀಲ್‌ ಅವರ ಮನೆಯ ಕಾಂಪೌಂಡ್‌ನ ಒಳಗಡೆ ನಿಲ್ಲಿಸಿದ ಬೈಕ್‌ ಕಳ ಮಾಡಲು ಯತ್ನಿಸಿದ್ದಾನೆ. 

ಬಳಿಕ ಮನೆ ಕಾಂಪೌಂಡ್‌ನಿಂದ ಹೊರ ತಂದಿದ್ದಾನೆ. ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಬೈಕ್‌ನ ಬ್ಯಾಟರಿ ಸ್ಫೋಟಿಸಿದ ಶಬ್ಧ ಕೇಳಿ ಜನರು ಹೊರ ಬಂದು ನೋಡಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.