ನವದೆಹಲಿ (ನ.1): ಹರಾರ‍ಯಣ ಚುನಾವಣಾ ಫಲಿತಾಂಶದಿಂದ ಉತ್ತೇಜಿತರಾಗಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಪ್ರಾದೇಶಿಕ ನಾಯಕರಿಗೆ ಬಲ ತುಂಬಲು ಹಾಗೂ ಪಕ್ಷದ ಸಂಘಟನೆಯನ್ನು ಪುನಾರಚಿಸಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪುನಾರಚನೆಯ ಭಾಗವಾಗಿ ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿ ಹಲವು ರಾಜ್ಯಗಳ ಪಕ್ಷದ ಅಧ್ಯಕ್ಷರನ್ನು ಬದಲಿಸಲಾಗುತ್ತದೆ ಎಂದು ಹೇಳಲಾಗಿದೆ.

ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಗರಿ

ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರಕ್ಕೆ ಹೋಗದಿದ್ದರೂ ಹರಾರ‍ಯಣದಲ್ಲಿ ಬಿಜೆಪಿ ಅಲೆಯನ್ನು ತಕ್ಕಮಟ್ಟಿಗೆ ಅಡಗಿಸಿ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನ ತಂದುಕೊಟ್ಟಭೂಪಿಂದರ್‌ ಹೂಡಾ ನಾಯಕತ್ವದಿಂದ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿದೆ. ಹೀಗಾಗಿಯೇ ಸೋನಿಯಾ ಅವರು ಪಕ್ಷ ಪುನಾರಚಿಸಲು ಮುಂದಾಗಿದ್ದಾರೆ, ಪ್ರಾದೇಶಿಕ ನಾಯಕರಿಗೆ ಬಲ ತುಂಬಲು ಚಿಂತನೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.

ದಿನೇಶ್ ಕೆಪಿಸಿಸಿ ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಸತ್ತೋಯ್ತು

ಹರಾರ‍ಯಣ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾಗಿರುವ ಕಾಂಗ್ರೆಸ್ಸಿನ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ನೀಡಿ, ರಾಜ್ಯವೊಂದರ ಹೊಣೆ ನೀಡಲಾಗುತ್ತದೆ. ಹಲವು ರಾಜ್ಯ ಉಸ್ತುವಾರಿಗಳನ್ನು ಬದಲಿಸಲಾಗುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಕರ್ನಾಟಕದಲ್ಲಿ ಯಾರು ಹಿಡಿಯುತ್ತಾರೆ ಗಾದಿ?

ಕರ್ನಾಟಕದಲ್ಲಿ ಹೋದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಅಧಿಕಾರದಲ್ಲಿದ್ದ ಬಹುತೇಕ ಸಚಿವರು ಸೋಲುಂಡಿದ್ದರು. ಆದರೂ, ಜೆಡಿಎಸ್‌ನೊಂದಿಗೆ ಸೇರಿ ಸರಕಾರ ರಚಿಸಲು ಸಫಲವಾದ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿಯಲ್ಲಿಯೇ ಚುನಾವಣೆಗೆ ಎದುರಿಸಿತ್ತು. 28 ಕೇತ್ರಗಳಲ್ಲಿ ಕೇವಲ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರ ಹೊರತುಪಡಿಸಿ, ಯಾವುದೇ ಕ್ಷೇತ್ರದಲ್ಲಿಯೂ ಕೈ ತನ್ನ ಪ್ರಭಾವ ತೋರುವಲ್ಲಿ ವಿಫಲವಾಯಿತು. ಆಗಲೇ ಕೈ ಅಧ್ಯಕ್ಷರ ಬದಲಾವಣೆಯ ಕೂಗು ಕೇಳಿತ್ತು. 

ರಾಜ್ಯ ಸರಕಾರದ ವಿರುದ್ಧ ಬಂಡಾಯವೆದ್ದು, ರಾಜೀನಾಮೆ ಸಲ್ಲಿಸಿ ಅನರ್ಹರಾದ ಶಾಸಕರ ಕ್ಷೇತ್ರದಲ್ಲಿ ಡಿಸೆಂಬರಿನಲ್ಲಿ ಚುನಾವಣೆ ನಡೆಯೆಲಿದ್ದು, ಈಗಾಗಲೇ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇಲ್ಲಿ ಸಿದ್ದರಾಮಯ್ಯ ಅವರ ಬಲವೇ ಹೆಚ್ಚಾದಂತೆ ತೋರುತ್ತಿದ್ದು, ಉಳಿದ ಕ್ಷೇತ್ರದ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಅಲ್ಲದೇ ಅಕ್ರಮ ಹಣ ವ್ಯವಹಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬಂದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ದಿನೇಶ್ ಗುಂಡೂರಾವ್ ಸ್ಥಾನಕ್ಕೆ ಹೊಸ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.