ಥಾಣೆ(ಅ.10) ಚೆನ್ನೈನಲ್ಲಿ ಬ್ಯಾನರ್ ಬಿದ್ದು ಸ್ಕೂಟರ್‌ನಲ್ಲಿ ಸಾಗುತ್ತಿದ್ದ 23 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಶುಭಶ್ರೀ ದುರ್ಮರಣಕ್ಕೆ ಈಡಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಮಹಾರಾಷ್ಟ್ರದ ಥಾಣೆಯಲ್ಲಿ 21 ವರ್ಷದ ವೈದ್ಯೆಯೊಬ್ಬರು ರಸ್ತೆ ಹೊಂಡಕ್ಕೆ ಬಲಿಯಾಗಿದ್ದಾರೆ.

ವೈದ್ಯೆ ನೇಹಾ ಶೇಖ್ ಬುಧವಾರ ರಾತ್ರಿ 10.30ರ ವೇಳೆಗೆ ತಮ್ಮ ಸಹೋದರನೊಂದಿಗೆ ಭಿವಾಂಡಿಯಿಂದ ತಮ್ಮ ಮನೆಗೆ ತೆರಳುತ್ತಿದ್ದರು. ಸಹೋದರ ಗಾಡಿ ಓಡಿಸುತ್ತಿದ್ದರೆ ನೇಹಾ ಹಿಂದೆ ಕುಳಿತಿದ್ದರು. ಸ್ಕೂಟರ್ ರಸ್ತೆ ಹೊಂಡವೊಂದಕ್ಕೆ  ಇಳಿದಿದೆ. ಪರಿಣಾಮ ಹಿಂದೆ ಕೂತಿದ್ದ ನೇಹಾ ಕೆಳಕ್ಕೆ ಬಿದ್ದಿದ್ದು ಹಿಂದಿನಿಂದ ಬಂದ ಟ್ರಕ್ ಅವರ ಮೇಲೆ ಹತ್ತಿದೆ.

ರಸ್ತೆಯಲ್ಲಿ ನಿಂತಿದ್ದ ಹಸುಗಳ ಮೇಲೆ ಹರಿದ ಕಾರು

ನೇಹಾ ಅವರ ವಿವಾಹ ನಿಶ್ಚಯವಾಗಿದ್ದು, ನವೆಂಬರ್‌ 7ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದರು. ಮದುವೆಯ ಶಾಪಿಂಗ್‌ಗಾಗಿ ಅವರು ಸಹೋದರನೊಂದಿಗೆ ತೆರಳಿದ್ದರು.

ಟ್ರಕ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿಜಕ್ಕೂ ಪ್ರಕರಣ ದಾಖಲಾಗಬೇಕಿದ್ದು ಲೋಕೋಪಯೋಗಿ ಅಧಿಕಾರಿಗಳು ಅಥವಾ ರಸ್ತೆಯ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆಗಾರಿಕೆ ವಹಿಸಿಕೊಂಡಿರುವ ಸಂಸ್ಥೆಯ ಮೇಲೆ ಎಂದು ಸ್ಥಳೀಯ ಸಂಘಟನೆಗಳು ಆಗ್ರಹಿಸಿವೆ.