ಭೋಪಾಲ್(ಅ.12): ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎಂದು ಹೇಳಲಾಗುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್‌ಗೆ ಮತ್ತೊಂದು ಹೊಸ ಶಾಕ್ ಕೊಟ್ಟಿರುವುದು ವಿಶೇಷ. 

ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸ್ವಾಗತ ಕೋರಿ ಬಿಜೆಪಿ ಅಳವಡಿಸಿರುವ ಫ್ಲೆಕ್ಸ್‌ವೊಂದು, ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ವದಂತಿಗಳ ಬಿರುಗಾಳಿಯನ್ನೇ ಎಬ್ಬಿಸಿದೆ.

ಸಿಂಧಿಯಾ ಅವರ ಬಿಂಡ್ ಜಿಲ್ಲೆಯ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಸಿಂಧಿಯಾ ಅವರಿಗೆ ಸ್ವಾಗತ ಕೋರಿ ಫ್ಲೆಕ್ಸ್ ಹಾಕಿದ್ದಾರೆ. ಇದರಿಂದ ಸಿಂಧಿಯಾ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ವದಂತಿ ಹಬ್ಬಿದೆ.

ಈ ಫ್ಲೆಕ್ಸ್‌ನಲ್ಲಿ ಸಿಂಧಿಯಾ ಪಕ್ಕದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅ ಮಿತ್ ಶಾ ಭಾವಚಿತ್ರ ಕೂಡ ಇದೆ.

ಸಂವಿಧಾನದ 370 ನೇ ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಿಂಧಿಯಾ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಫ್ಲೆಕ್ಸ್‌ನಲ್ಲಿ ಕಾಂಗ್ರೆಸ್ ಮುಖಂಡನ ಭಾವಚಿತ್ರ ಕಾಣಿಸಿಕೊಂಡಿದೆ.