ಬೆಂಗಳೂರು :  ಇತ್ತೀಚಿಗೆ ನಾಗವಾರಪಾಳ್ಯ ಸಮೀಪ ಮಧ್ಯರಾತ್ರಿಯಲ್ಲಿ ಬಿಯರ್‌ ಕೊಡಲು ನಿರಾಕರಿಸಿದ ಕಾರಣಕ್ಕೆ ಓಲಾ ಕ್ಯಾಬ್‌ ಚಾಲಕನನ್ನು ಹತ್ಯೆ ಮಾಡಿದ್ದ ಕುಖ್ಯಾತ ಸುಲಿಗೆಕೋರನೊಬ್ಬನಿಗೆ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂದೂಕಿನ ಮೂಲಕ ‘ಮತ್ತು’ ಇಳಿಸಿದ್ದಾರೆ.

ಜೋಗಪಾಳ್ಯದ ನಿವಾಸಿ ಮುರಳೀಧರನ್‌ ಅಲಿಯಾಸ್‌ ಮುರಳಿ ಮೇಲೆ ಪೊಲೀಸರ ಗುಂಡಿನ ದಾಳಿ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಗವಾರಪಾಳ್ಯದಲ್ಲಿ ಡಿ.3ರಂದು ನಡೆದಿದ್ದ ಕ್ಯಾಬ್‌ ಚಾಲಕ ಮೋಹನ್‌ ಕೊಲೆ ಪ್ರಕರಣ ಸಂಬಂಧ ಮುರಳಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಗುರುವಾರ ಮುಂಜಾನೆ 3.30ರ ಸುಮಾರಿಗೆ ಕತ್ತಾಳಿಪಾಳ್ಯ ಮುಖ್ಯರಸ್ತೆಯಲ್ಲಿ ಆರೋಪಿಯನ್ನು ಸುತ್ತುವರೆದು ಇನ್ಸ್‌ಪೆಕ್ಟರ್‌ ರಮೇಶ್‌ ತಂಡವು ಬಂಧಿಸಲು ಮುಂದಾಗಿದೆ. ಆಗ ಹೆಡ್‌ ಕಾನ್‌ಸ್ಟೇಬಲ್‌ ವಿಜಯ್‌ ಕುಮಾರ್‌ ಅವರಿಗೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮುರಳಿ ಎಡಗಾಲಿಗೆ ಇನ್ಸ್‌ಪೆಕ್ಟರ್‌ ಗುಂಡು ಹೊಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೋಗುಪಾಳ್ಯದ ಪುಂಡರು:  ಹಲವು ವರ್ಷಗಳಿಂದ ಜೋಗಪಾಳ್ಯದ ಮುರಳೀಧರ್‌ ಅಲಿಯಾಸ್‌ ಮುರಳಿ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದು, ಇರುಳು ಹೊತ್ತಿನಲ್ಲಿ ನಿರ್ಜನ ರಸ್ತೆಗಳಲ್ಲಿ ಸಂಚರಿಸುವ ನಾಗರಿಕರನ್ನು ಅಡ್ಡಗಟ್ಟಿಅವರಿಗೆ ಡ್ರ್ಯಾಗರ್‌ ತೋರಿಸಿ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ.

ಓಲಾ ಕಂಪನಿಯಲ್ಲಿ ಕ್ಯಾಬ್‌ ಚಾಲಕರಾಗಿದ್ದ ಅರಸಿಕೆರೆ ತಾಲೂಕಿನ ಮೋಹನ್‌ ಅವರು, ಡಿ.3ರ ರಾತ್ರಿ ಹೋಟೆಲ್‌ನಲ್ಲಿ ಊಟ ಮತ್ತು ‘ರೆಡ್‌ಬುಲ್‌’ ಪಾನೀಯವನ್ನು ಪಾರ್ಸಲ್‌ ತೆಗೆದುಕೊಂಡು ಮನೆಗೆ ಹೊರಟ್ಟಿದ್ದರು. ಮಾರ್ಗ ಮಧ್ಯೆ ಎದುರಾದ ಮುರಳಿ ಗ್ಯಾಂಗ್‌ ಬಿಯರ್‌ ಬಾಟಲ್‌ ಬೇಕೆಂದು ಕೇಳಿದ್ದಕ್ಕೆ ಮೋಹನ್‌ ಆಕ್ಷೇಪಿಸಿದ್ದರು. ಇದರಿಂದ ಕೆರಳಿದ ಆರೋಪಿ, ಡ್ರ್ಯಾಗರ್‌ನಿಂದ ಇರಿದು ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬೈಯ್ಯಪ್ಪನಹಳ್ಳಿ ಪೊಲೀಸರು, ಬುಧವಾರ ಮುಂಜಾನೆ ಕತ್ತಾಳಿಪಾಳ್ಯ ಮುಖ್ಯರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಮುರಳಿ ತೆರಳುತ್ತಿರುವ ಮಾಹಿತಿ ಸಿಕ್ಕಿದೆ.

ಕೂಡಲೇ ಇನ್ಸ್‌ಪೆಕ್ಟರ್‌ ರಮೇಶ್‌ ತಂಡವು, ಕತ್ತಾಳಿಪಾಳ್ಯ ಮುಖ್ಯರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಅಲ್ಲಿಗೆ ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಪೊಲೀಸರ ಕಂಡು ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದಾಗ ಪೊಲೀಸರು ಸುತ್ತುವರೆದಿದ್ದಾರೆ. ಬಳಿಕ ಶರಣಾಗುವಂತೆ ಸೂಚಿಸಿದಾಗ ಹೆಡ್‌ ಕಾನ್‌ಸ್ಟೇಬಲ್‌ ವಿಜಯ್‌ ಕುಮಾರ್‌ ಮೇಲೆ ತನ್ನ ಬಳಿಯಿದ್ದ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಈ ಹಂತದಲ್ಲಿ ಆತನ ಕಾಲಿಗೆ ಇನ್ಸ್‌ಪೆಕ್ಟರ್‌ ಗುಂಡು ಹೊಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.