ನವದೆಹಲಿ (ಜ. 15): ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟಮೊದಲ ಫಿಲಿಪ್‌ ಕೊಟ್ಲರ್‌ ಅಧ್ಯಕ್ಷೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನರು, ಆದಾಯ ಮತ್ತು ಪೃಥ್ವಿ ಈ ಮೂರು ಸಂಗತಿಗಳನ್ನು ಆಧರಿಸಿ ಪ್ರಶಸ್ತಿಯನ್ನು ನಿರ್ಧರಿಸಲಾಗಿದೆ. ದೇಶದ ಮುಖಂಡರೊಬ್ಬರಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ದೇಶಕ್ಕೆ ನೀಡಿದ ಅಸಾಧಾರಣ ನಾಯಕತ್ವವನ್ನು ಗುರುತಿಸಿ ಮೋದಿ ಅವರನ್ನು ಮೊಟ್ಟಮೊದಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಫಿಲಿಪ್‌ ಕೊಟ್ಲರ್‌ ಅವರು ನಾರ್ವೆ ವಿಶ್ವವಿದ್ಯಾಲಯದ ಕೆಲ್ಲಾಂಗ್‌ ಸ್ಕೂಲ್‌ ಆಫ್‌ ಮ್ಯಾನೇಜ್ಮೆಂಟ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾರ್ಜಿಯಾದ ಎಮೋರಿ ವಿಶ್ವವಿದ್ಯಾಲಯದ ಜಗದೀಶ್‌ ಸೇಠ್‌ ಅವರು ಮೋದಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಭಾರತಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆ ಹಾಗೂ ಮೋದಿ ಅವರ ಪರಿಶ್ರಮದಿಂದ ಆರ್ಥಿಕ ಸಾಮಾಜಿಕ ಮತ್ತು ತಾಂತ್ರಿಕವಾಗಿ ಭಾರತ ಮುಂದುವರಿದಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಮೋದಿ ಅವರ ದಾರ್ಶನಿಕ ನಾಯಕತ್ವ ಭಾರತದಲ್ಲಿ ಡಿಜಿಟಲ್‌ ಕ್ರಾಂತಿ, ಸಾಮಾಜಿಕ ಒಳಗೊಳ್ಳುವಿಕೆಗೆ ಕಾರಣವಾಗಿದೆ. ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ವಚ್ಛ ಭಾರತದಂತಹ ಯೋಜನೆಗಳಿಂದಾಗಿ ಭಾರತ ವಿಶ್ವದ ವ್ಯಾಪಾರಿ ಕೇಂದ್ರವೆನಿಸಿಕೊಂಡಿದೆ ಎಂದು ಪ್ರಶಸ್ತಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.