ಧರ್ಮಶಾಲಾ (ಡಿ. 28): ದೇಶಾದ್ಯಂತ ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿದ್ರಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಮೋದಿ ಟಾಂಗ್‌ ಕೊಟ್ಟಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಸಾಲ ಮನ್ನಾ ಭರವಸೆಯನ್ನು ಈ ಹಿಂದೆ ಈಡೇರಿಸಿಲ್ಲ. ಕರ್ನಾಟಕದಲ್ಲಿ ಕೇವಲ 800 ಜನರಿಗಷ್ಟೇ ಸಾಂಕೇತಿಕ ಮೊತ್ತ (ಟೋಕನ್‌ ಅಮೌಂಟ್‌) ನೀಡಿದೆ. ತನ್ಮೂಲಕ ಜನರನ್ನು ಸಾಲ ಮನ್ನಾ ವಿಚಾರದಲ್ಲಿ ಮೂರ್ಖರನ್ನಾಗಿಸುತ್ತಿದೆ ಎಂದು ಹರಿಹಾಯ್ದಿದ್ಧಾರೆ.

ಹಿಮಾಚಲಪ್ರದೇಶದ ಜೈ ರಾಂ ಠಾಕೂರ್‌ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಜನ ಆಭಾರ’ ರಾರ‍ಯಲಿ ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ‘ಒನ್‌ ರಾರ‍ಯಂಕ್‌ ಒನ್‌ ಪೆನ್ಷನ್‌’ ಜಾರಿ ಬೇಡಿಕೆ ವಿಚಾರದಲ್ಲೂ ಕಾಂಗ್ರೆಸ್‌ ಇದೇ ರೀತಿ ಮಾಜಿ ಸೈನಿಕರನ್ನು ದಾರಿತಪ್ಪಿಸಿತ್ತು ಎಂದು ಎಂದು ಕಿಡಿಕಾರಿದರು.

6 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡುವ ಭರವಸೆ ನೀಡಿ 2009ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌, ಕೇವಲ 60 ಸಾವಿರ ಕೋಟಿ ರು. ಸಾಲವನ್ನಷ್ಟೇ ಮನ್ನಾ ಮಾಡಿತ್ತು. ರೈತರೇ ಅಲ್ಲದ ಲಕ್ಷಾಂತರ ಮಂದಿ ಕಾಂಗ್ರೆಸ್ಸಿನ ಸಾಲ ಮನ್ನಾ ಯೋಜನೆಯಿಂದ ಲಾಭ ಮಾಡಿಕೊಂಡರು ಎಂಬುದನ್ನು ಮಹಾಲೇಖಪಾಲರು (ಸಿಎಜಿ) ಪತ್ತೆ ಮಾಡಿದ್ದರು. ಪಂಜಾಬ್‌ ಹಾಗೂ ಹರಾರ‍ಯಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಸಾಲ ಮನ್ನಾ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು. ಆದರೆ ಅದನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಪಂಜಾಬ್‌ನ ರೈತರಿಗೆ ಏನೂ ಸಿಗಲಿಲ್ಲ. ಕರ್ನಾಟಕದಲ್ಲಿ 800 ರೈತರಿಗೆ ಸಾಂಕೇತಿಕ ಮೊತ್ತವಷ್ಟೇ ಲಭಿಸಿದೆ ಎಂದು ಚಾಟಿ ಬೀಸಿದರು.

ಹಿಮಾಚಲಪ್ರದೇಶ ನನ್ನ ತವರಿದ್ದಂತೆ. ಹಲವು ವರ್ಷಗಳ ಕಾಲ ಪಕ್ಷದ ಸಂಘಟನೆಗಾಗಿ ಇಲ್ಲಿ ಕೆಲಸ ಮಾಡಿದ್ದೇನೆ. ನನ್ನ ಜತೆ ಕೆಲಸ ಮಾಡಿದ ನಾಯಕರು ಇಂದು ಮುಂಚೂಣಿಯಲ್ಲಿರುವುದನ್ನು ಕಂಡು ಸಂತೋಷವಾಗುತ್ತಿದೆ. ಗಡಿಯಲ್ಲಿ ಯಾವುದೇ ತ್ಯಾಗಕ್ಕೆ ಸಜ್ಜಾಗಿರುವ ವೀರಯೋಧರ ನೆಲ ಇದಾಗಿದೆ ಎಂದು ಹೇಳಿದರು.

---

.90 ಸಾವಿರ ಕೋಟಿ ಹಗರಣ

ಬಯಲಿಗೆಳೆದಿದ್ದೇವೆ: ಮೋದಿ

- ಹಗರಣಕೋರರು ಓಡಿ ಹೋಗಲು ಚೌಕಿದಾರ ಬಿಡಲ್ಲ

ಧರ್ಮಶಾಲಾ: ‘ದೇಶದ ಚೌಕಿದಾರನೇ ಕಳ್ಳನಾಗಿದ್ದಾನೆ’ ಎಂದು ಪದೇಪದೇ ಆರೋಪಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಕಳ್ಳರನ್ನು ಬಿಡಲು ಚೌಕಿದಾರ ತಯಾರಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 90 ಸಾವಿರ ಕೋಟಿ ರು. ಹಗರಣವನ್ನು ಬಯಲಿಗೆ ತಂದಿದ್ದೇವೆ. ಹಿಂದಿನ ಸರ್ಕಾರ ನಡೆಸುತ್ತಿದ್ದ ಪಿಂಚಣಿ ಯೋಜನೆಗಳಲ್ಲಿನ ಬೋಗಸ್‌ ಫಲಾನುಭವಿಗಳ ಹಗರಣ ಅದಾಗಿತ್ತು ಎಂದು ತಿಳಿಸಿದ್ದಾರೆ.