ಚಾಂಗ್ಸರಿ(ಫೆ.09): ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ಯಾವುದೇ ಕಾರಣಕ್ಕೂ ಈಶಾನ್ಯ ರಾಜ್ಯಗಳ ಜನರ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಇಂದು ಅಸ್ಸಾಂನ ಚಾಂಗ್ಸರಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗದಂತೆ ಮತ್ತು ಸಂಪೂರ್ಣ ತನಿಖೆ ನಂತರ ರಾಜ್ಯ ಸರ್ಕಾರಗಳ ಶಿಫಾರಸಿನ ಮೇಲೆ ಪೌರತ್ವ ನೀಡಲಾಗುವುದು ಎಂದು ಹೇಳಿದರು.

ದೇಶವನ್ನು ಅಕ್ರಮವಾಗಿ ಪ್ರವೇಶಿಸಿದವರು ಮತ್ತು ತಮ್ಮ ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಮನೆ, ಮಠ ಬಿಟ್ಟು ಬಲವಂತವಾಗಿ ಬಂದವರಿಗೂ ಬಹಳ ವ್ಯತ್ಯಾಸ ಇದೆ ಎಂದು ಪ್ರಧಾನಿ ಈ ವೇಳೆ ಹೇಳಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಭಾಷೆ, ಸಂಸ್ಕೃತಿ, ಸಂಪನ್ಮೂಲ ರಕ್ಷಣೆಗೆ ಬದ್ಧವಾಗಿದೆ. ಅಸ್ಸಾಂ ಮತ್ತು ಈಶಾನ್ಯಾ ರಾಜ್ಯಗಳ ಜನರ ನಿರೀಕ್ಷೆ ಈಡೇರಿಸಲು ನಾವು ಬದ್ಧ ಎಂದು ಪ್ರಧಾನಿ ನುಡಿದರು.

ಇನ್ನು ಪೌರತ್ವ ತಿದ್ದುಪಡಿ ಮಸೂದೆ ಕುರಿತು ವಿರೋಧಿಗಳು ಜನರಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದು, ಈ ವದಂತಿಗಳನ್ನು ನಂಬಬಾರದು ಎಂದು ಮೋದಿ ಜನರಲ್ಲಿ ಮನವಿ ಮಾಡಿದರು.