ಶ್ರೀನಗರ (ಫೆ.20): ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ಆದರೆ ರಾಜ್ಯಪಾಲ ಸತ್ಯಪಾಲ್ ಮಲಿಕ್‌ರನ್ನು ಬದಲಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

ಪುಲ್ವಾಮಾ ದಾಳಿಯ ಮರುದಿನ ನಡೆದ ಕ್ಯಾಬಿನೆಟ್ ಕಮಿಟಿ ಆಫ್ ಸೆಕ್ಯುರಿಟಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಿಲಿಟರಿ ಹಿನ್ನೆಲೆ ಇರುವ ಸೇನಾಧಿಕಾರಿಯನ್ನು ರಾಜ್ಯಪಾಲರನ್ನಾಗಿ ಕಳುಹಿಸುವ ಬಗ್ಗೆ ಸಲಹೆ ನೀಡಿದ್ದು, ಪ್ರಧಾನಿಗೂ ಇದು ಮನವರಿಕೆ ಆಗಿದೆ ಎನ್ನಲಾಗುತ್ತಿದೆ.

ಘಟನೆ ನಡೆದ ತಕ್ಷಣ ರಾಜ್ಯಪಾಲ ಸತ್ಯಪಾಲ್ ಮಲಿಕ್ ಬೇಹುಗಾರಿಕಾ ವೈಫಲ್ಯ ಎಂದು ಹೇಳಿದ್ದು ಸಹಜವಾಗಿ ದೋವಲ್‌ರನ್ನು ಕೆರಳಿಸಿತ್ತು. ಆದರೆ ಯಾರನ್ನು ರಾಜ್ಯ ಪಾಲರನ್ನಾಗಿ ಕಳಿಸಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇದ್ದಂತಿಲ್ಲ.

ಹಿಂದೆ 1989 ರಲ್ಲಿ ಜಗಮೋಹನ್ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಕಠಿಣ ಕ್ರಮಕ್ಕೆ ಮುಂದಾಗಿದ್ದು ಅಲ್ಲಿನ ಪ್ರತ್ಯೇಕ ತಾವಾದಿಗಳ ಜೊತೆಗೆ ರಾಜಕೀಯ ಪಕ್ಷಗಳನ್ನೂ ಕೆರಳಿಸಿತ್ತು. ಈಗ ಮಿಲಿಟರಿ ಹಿನ್ನೆಲೆಯ ವ್ಯಕ್ತಿಯನ್ನೇ ರಾಜ್ಯಪಾಲರನ್ನಾಗಿ ನೇಮಿಸಿದರೆ ಏನು ಪ್ರತಿಕ್ರಿಯೆ ಬರಬಹುದು ಎಂದು ಬಿಡಿಸಿ ಹೇಳಬೇಕಿಲ್ಲ. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ಧಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ