ಸೋಲ್‌ (ಫೆ. 23):  ಜಾಗತಿಕ ಆರ್ಥಿಕ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ಸಹಕಾರಕ್ಕೆ ಸಾಕಷ್ಟುಕೊಡುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾದ ಗೌರವಾನ್ವಿತ ‘ಸೋಲ್‌ ಶಾಂತಿ ಪುರಸ್ಕಾರ-2018’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶುಕ್ರವಾರ ಇಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸೋಲ್‌ ಶಾಂತಿ ಪ್ರಶಸ್ತಿ ಫೌಂಡೇಷನ್‌ ಈ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಹಾಗೂ ಅವರ ಸಾಧನೆಗಳ ಕುರಿತಾದ ಕಿರು ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಲಾಯಿತು.

ಈ ಪ್ರಶಸ್ತಿಯು 1.42 ಕೋಟಿ ರು. ನಗದು ಹೊಂದಿದ್ದು, ಅದನ್ನು ತಮ್ಮ ಮಹತ್ವಾಕಾಂಕ್ಷಿಯ ನದಿ ಗಂಗಾ ಶುದ್ಧೀಕರಣ ಯೋಜನೆ ‘ನಮಾಮಿ ಗಂಗೆ’ಗೆ ಪ್ರಧಾನಿ ಮೋದಿ ಅರ್ಪಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ ಅವರು, ‘ಈ ಪ್ರಶಸ್ತಿಯು ನನಗೆ ಮಾತ್ರ ಸೇರಿದ್ದಲ್ಲ. ಬದಲಿಗೆ ಭಾರತೀಯ ನಾಗರಿಕರಿಗೆ ಸೇರಿದ್ದಾಗಿದೆ. ಭಾರತೀಯರ ಹಂಬಲ, ಸ್ಫೂರ್ತಿ ಹಾಗೂ ಶ್ರಮದಿಂದಾಗಿ ಭಾರತ ಕಳೆದ 5 ವರ್ಷಗಳಲ್ಲಿ ಸಾಕಷ್ಟುಸಾಧನೆ ಮಾಡಿದೆ. ಭಾರತೀಯರ ಪರವಾಗಿ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತಿದ್ದೇನಷ್ಟೇ’ ಎಂದು ಹೇಳಿದರು.