ನವದೆಹಲಿ[ಜ.04]: ಮಾಜಿ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ‘ಜೈಜವಾನ್‌, ಜೈ ಕಿಸಾನ್‌’ ಘೋಷಣೆ ಮೊಳಗಿಸಿದ್ದರು. ಅದಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ‘ಜೈ ವಿಜ್ಞಾನ್‌’ ಎಂಬ ಪದ ಸೇರ್ಪಡೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಆ ಘೋಷಣೆಗೆ ಇನ್ನೂ ಒಂದು ಪದವನ್ನು ಸೂಚಿಸಿದ್ದಾರೆ. ಅದುವೇ ಜೈ ಅನುಸಂಧಾನ್‌.

ಜಲಂಧರ್‌ನಲ್ಲಿ ಗುರುವಾರ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ 106ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಂದಿನ ಹೊಸ ಘೋಷಣೆ ‘ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌ ಹಾಗೂ ಜೈ ಅನುಸಂಧಾನ್‌’ ಆಗಿದೆ ಎಂದು ಹೇಳಿದರು.

ಭಾರತ ತನ್ನ ಹಾಲಿ ಸ್ಥಿತಿಯಿಂದ ರೂಪಾಂತರಗೊಳ್ಳುತ್ತಿರುವುದಕ್ಕೆ, ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮುನ್ನಡೆಯುತ್ತಿರುವುದಕ್ಕೆ ವಿಜ್ಞಾನವೇ ಕಾರಣ. 2018ನೇ ಇಸ್ವಿ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಉತ್ತಮವಾಗಿತ್ತು. ವೈಮಾನಿಕ ದರ್ಜೆಯ ಜೈವಿಕ ಇಂಧನ, ದೃಷ್ಟಿವಂಚಿತರಿಗಾಗಿ ದಿವ್ಯ ನಯನ, ಸರ್ವೈಕಲ್‌ ಕ್ಯಾನ್ಸರ್‌, ಟಿಬಿ ಹಾಗೂ ಡೆಂಘೀ ಪತ್ತೆಗಾಗಿ ಅಗ್ಗದ ಉಪಕರಣ, ಭೂಕುಸಿತದ ಕುರಿತು ತಕ್ಷಣಕ್ಕೆ ಮುನ್ಸೂಚನೆ ನೀಡುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಯಿತು ಎಂದು ಸ್ಮರಿಸಿದರು.