400 ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ರಣಕಹಳೆಗೆ ಮೋದಿ ಲೆಕ್ಕಾಚಾರವಿದು..?

https://static.asianetnews.com/images/authors/b348a094-0bef-5801-a1f6-61e57071185f.jpg
First Published 14, Jul 2018, 9:18 AM IST
PM Modi Address 50 Rallies Before Lok Sabha Election
Highlights

ಲೋಕಸಭೆ ಚುನಾವಣೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ  ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮತ್ತೆ ಅಧಿಕಾರಕ್ಕೆ ಏರುವ ನಿಟ್ಟಿನಲ್ಲಿ ಮಹತ್ವದ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. 

ನವದೆಹಲಿ :  ಲೋಕಸಭೆಯ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರ್ಯಾಲಿಗಳನ್ನು ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ, ಅಂದರೆ ಫೆಬ್ರವರಿ ಒಳಗಾಗಿ 100 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 50 ಸಮಾವೇಶಗಳನ್ನು ಅವರು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಮುಂಚೂಣಿ ನಾಯಕರಾದ ರಾಜನಾಥ ಸಿಂಗ್‌ ಹಾಗೂ ನಿತಿನ್‌ ಗಡ್ಕರಿ ಅವರು ಪ್ರತ್ಯೇಕವಾಗಿ 100 ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ 50 ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ತನ್ಮೂಲಕ ಚುನಾವಣೆ ರಣಕಹಳೆ ಅಧಿಕೃತವಾಗಿ ಮೊಳಗುವ ಮೊದಲೇ 400 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಬಿಜೆಪಿ ಭರ್ಜರಿ ಆರಂಭ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರವಿದೆ.

ಮೋದಿ ಅವರು 100 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 50 ರ್ಯಾಲಿಗಳನ್ನು ನಡೆಸುವ ಜತೆಜತೆಗೇ ವರ್ಷಾಂತ್ಯಕ್ಕೆ ಎದುರಾಗಲಿರುವ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಪ್ರಚಾರಗಳಲ್ಲೂ ಸಕ್ರಿಯರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಈ ಸಮಾವೇಶಗಳ ಮೂಲಕ ಪಕ್ಷದ ಸಂಘಟನೆಯನ್ನು ಚುನಾವಣಾ ಸ್ಥಿತಿಗೆ ಒಯ್ದಂತಾಗುತ್ತದೆ. ಬಿಜೆಪಿಯ ಪ್ರಚಾರಕ್ಕೆ ವೇದಿಕೆ ಸಜ್ಜುಗೊಳಿಸಿದಂತಾಗುತ್ತದೆ ಎಂದು ಹೇಳಲಾಗಿದೆ. ಸಾರ್ವತ್ರಿಕ ಲೋಕಸಭೆ ಚುನಾವಣೆಯು ಏಪ್ರಿಲ್‌- ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆಗಳಿವೆ.

loader