ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ಸುಮಾರು ಐದು ದಿನಗಳ ಕಾಲ ರಾಜ್ಯದ 15 ವಿವಿಧ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸುಮಾರು ಐದು ಅಥವಾ ಆರು ದಿನಗಳ ಕಾಲ ಮೋದಿ ಅವರು ರಾಜ್ಯದಲ್ಲಿ ಸಂಚರಿಸಲಿದ್ದು, ಒಂದೊಂದು ದಿನ ಎರಡು ಅಥವಾ ಮೂರು ಕಡೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದುವರೆಗೆ ಮೋದಿ ಅವರ ಪ್ರಚಾರ ಕಾರ್ಯಕ್ರಮದ ಅಂತಿಮ ಪಟ್ಟಿಸಿದ್ಧವಾಗಿಲ್ಲವಾದರೂ ರಾಜ್ಯ ನಾಯಕರು ರಾಜಧಾನಿ ಬೆಂಗಳೂರು ಸೇರಿದಂತೆ ಸುಮಾರು 14 ಜಿಲ್ಲೆಗಳಲ್ಲಿ ಸಭೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ರೂಪರೇಷೆ ಸಿದ್ಧಪಡಿಸುತ್ತಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶ ಒಳಗೊಂಡು 32 ವಿಧಾನಸಭಾ ಕ್ಷೇತ್ರಗಳಿರುವುದರಿಂದ ಬೆಂಗಳೂರಿನಲ್ಲಿ ಎರಡು ಬಾರಿ ಸಮಾವೇಶಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಯೂ ಇದೆ.

ಬಹುತೇಕ ಮೇ 1ರಿಂದ ಮೋದಿ ಅವರು ರಾಜ್ಯ ಚುನಾವಣಾ ಪ್ರಚಾರದ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊನೆಯ ಹಂತದಲ್ಲಿ ಮೋದಿ ಅವರು ಪ್ರಚಾರ ಮಾಡುವುದರಿಂದ ಪಕ್ಷದ ಪರ ಅಲೆ ಸೃಷ್ಟಿಯಾಗಲಿದ್ದು, ಅದು ಮೇ 12ರಂದು ಮತಗಳಾಗಿ ಪರಿವರ್ತನೆಯಾಗುವ ನಿರೀಕ್ಷೆಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ.

ಸದ್ಯದ ರೂಪರೇಷೆ: ಸದ್ಯಕ್ಕೆ ಸಿದ್ಧಪಡಿಸಲಾಗುತ್ತಿರುವ ಮೋದಿ ಅವರ ಪ್ರವಾಸದ ರೂಪರೇಷೆಗಳ ಪ್ರಕಾರ ಮೇ 1ರಂದು ಚಾಮರಾಜನಗರ, ಉಡುಪಿ, ಬೆಳಗಾವಿಯಲ್ಲಿ, ಮೇ 3ರಂದು ಕಲಬುರಗಿ, ಬಳ್ಳಾರಿ, ಬೆಂಗಳೂರಿನಲ್ಲಿ, ಮೇ 5ರಂದು ತುಮಕೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ, ಮೇ 7ರಂದು ರಾಯಚೂರು, ಚಿತ್ರದುರ್ಗ, ಕೋಲಾರದಲ್ಲಿ, ಮೇ 8ರಂದು ವಿಜಯಪುರ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದರಲ್ಲಿ ಒಂದಿಷ್ಟುಬದಲಾವಣೆಯಾಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

ಬಿಜೆಪಿ ಮುಖಂಡರ ಒಟ್ಟು 450 ಪ್ರಚಾರ ಸಭೆಗಳು 

ಒಟ್ಟಾರೆ ರಾಜ್ಯ ವಿಧಾನಸಭೆಯ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರಿಂದ ಮೇ 10ರವರೆಗೆ ರಾಜ್ಯಾದ್ಯಂತ ಒಟ್ಟು 450 ಪ್ರಚಾರ ಸಭೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಅಂದರೆ, ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಬೆನ್ನಲ್ಲೇ ಪ್ರಚಾರ ಸಭೆಗಳು ಆರಂಭವಾಗಲಿವೆ. ಬಹಿರಂಗ ಪ್ರಚಾರ ಅಂತ್ಯಗೊಳ್ಳುವವರೆಗೂ ಸತತವಾಗಿ ಎಲ್ಲ ಜಿಲ್ಲೆ ಹಾಗೂ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಪ್ರಚಾರ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದೊಂದು ದಿನ ಏಕಕಾಲದಲ್ಲಿ ಹತ್ತಾರು ಸಭೆಗಳು ನಡೆಯಲಿವೆ ಎಂದು ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ.