ಗೋಪಾಲ್‌ ಯಡಗೆರೆ

ಶಿವಮೊಗ್ಗ[ಸೆ.10]: ಪಶ್ಚಿಮಘಟ್ಟದೊಳಗಿನ ದಟ್ಟಕಾಡು ಬರಿದು ಮಾಡಿದ್ದಾರೆ ಎಂದು ಆರೋಪಿಸಿ ತಲತಲಾಂತರದಿಂದ ಅಲ್ಲಿದ್ದ ಜನರನ್ನು ಹಲವು ಯೋಜನೆಗಳ ಮೂಲಕ ಒಕ್ಕಲೆಬ್ಬಿಸುವ ಪ್ರಯತ್ನ ಒಂದೆಡೆ. ಇಲಾಖೆ ಮತ್ತು ವನ್ಯಪ್ರಾಣಿಗಳ ಕಾಟದಿಂದ ಕಾಡಿನೊಳಗೆ ಬದುಕು ಸಾಗಿಸುವುದೇ ಕಷ್ಟಎಂಬ ಚಿಂತೆ ಅಲ್ಲಿನ ಜನರೊಳಗೆ. ಈ ನಡುವೆ ಪಶ್ಚಿಮ ಘಟ್ಟದ ತಳವೇ ಸರಿಯಿಲ್ಲ, ಅಲ್ಲಿ ವಾಸ ಮಾಡುವುದು ಅಪಾಯಕಾರಿ ಎಂಬ ಚರ್ಚೆಗಳು ಇದೀಗ ಮಲೆನಾಡಿನ ಜನರನ್ನು ಇನ್ನಷ್ಟುಆತಂಕಕ್ಕೆ ನೂಕಿದೆ.

ಏನಾಗುತ್ತಿದೆ ಪಶ್ಚಿಮ ಘಟ್ಟದಲ್ಲಿ?

ಪಶ್ಚಿಮಘಟ್ಟವಾಸಕ್ಕೆ ಯೋಗ್ಯವಲ್ಲ, ಅದೊಂದು ಅಪಾಯಕಾರಿ ಪ್ರದೇಶ ಎಂಬ ಮಾತಿಗೆ ನಿದರ್ಶನವಾಗಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ವಿದ್ಯಮಾನ ಈ ತಳಮಳಕ್ಕೆ ಕಾರಣವಾಗಿದೆ. ಕಳೆದ ವರ್ಷ ಕೇರಳ ಮತ್ತು ನಮ್ಮ ರಾಜ್ಯದ ಮಡಿಕೇರಿಯಲ್ಲಿ ಸಂಭವಿಸಿದ ಭೂಕುಸಿತ ಇದರ ಮುನ್ನುಡಿಯಂತಿತ್ತು. ಇದು ಆಕಸ್ಮಿಕ ಇರಬೇಕು ಎಂದು ಮನಸ್ಸಿನೊಳಗೆ ಸಮಾಧಾನಪಟ್ಟುಕೊಳ್ಳುತ್ತಿರುವಾಗಲೇ ಈ ವರ್ಷ ಕೊಡಗಿನ ಜೊತೆಗೆ ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸುತ್ತಮುತ್ತ ಸಂಭವಿಸಿದ ಭಾರೀ ಭೂಕುಸಿತ ಭಯಾನಕ ಹೆದರಿಕೆಯೊಂದನ್ನು ಹುಟ್ಟಿಸಿದೆ.

ಭೂಕುಸಿತವೆಂದರೆ ಎಲ್ಲೋ ಚಿಕ್ಕದಾಗಿ ಕಡಿದ ಗುಡ್ಡ ಕುಸಿಯುವ ವಿದ್ಯಮಾನವಲ್ಲ. ಬದಲಾಗಿ ಇಡೀ ಗುಡ್ಡಕ್ಕೆ ಗುಡ್ಡವೇ ಜಾರಿ ಮೈಲುಗಟ್ಟಲೆ ದೂರದಲ್ಲಿ ಪ್ರತಿಷ್ಠಾಪಿತವಾಗುವ, ಹೀಗೆ ಜಾರಿ ಹೋಗುವಾಗ ಎದುರಿಗೆ ಸಿಕ್ಕ ತೋಟ, ಗದ್ದೆ ಎಲ್ಲವನ್ನೂ ತನ್ನೊಡಲಲ್ಲಿ ಸೆಳೆದೊಯ್ಯುವ ಈ ಪ್ರಕ್ರಿಯೆ ಭಯ ಹುಟ್ಟಿಸುತ್ತದೆ. ಅಗ್ನಿ ಪರ್ವತವೊಂದರ ಸ್ಫೋಟದಲ್ಲಿ ಲಾವಾರಸ ಎಲ್ಲವನ್ನೂ ನುಂಗಿ ನೀರು ಕುಡಿದು ಸಾಗುವ ರೀತಿಯಲ್ಲಿ ಗೋಚರವಾಗುತ್ತಿದೆ.

ವಾಸ್ತವವಾಗಿ ಏನಾಗುತ್ತಿದೆ ಇಲ್ಲಿ? ನಿಜವಾಗಿಯೂ ಪಶ್ಚಿಮ ಘಟ್ಟವಾಸಕ್ಕೆ ಯೋಗ್ಯವಲ್ಲವೇ? ಅಪಾಯಕಾರಿ ಪ್ರದೇಶದ ಮೇಲೆ ಒಂದು ಸಂಸ್ಕೃತಿ ಬೆಳೆದು ನಿಂತಿದೆಯೇ? ಇಂದಲ್ಲ ನಾಳೆ ಈ ಪ್ರದೇಶದಿಂದ ಜನ ಹೊರ ಹೋಗುವುದು ಅನಿವಾರ್ಯವೇ ಎಂಬೆಲ್ಲ ಪ್ರಶ್ನೆಗಳು ಎದ್ದುಕುಳಿತಿವೆ.

ಗುಡ್ಡ ಕುಸಿತಕ್ಕೆ ಕಾರಣ ಏನು?

ಜನರು ಕಾಡನ್ನು ಕಡಿದರು, ನೆಲವನ್ನು ಬಗೆದರು ಎಂಬಷ್ಟೇ ಕಾರಣವನ್ನು ಮುಂದಿಟ್ಟುಕೊಂಡು ಇಡೀ ವಿದ್ಯಮಾನಕ್ಕೆ ತಿಪ್ಪೆ ಸಾರಿಸಲು ಸಾಧ್ಯವಿಲ್ಲ. ಕಳಸದಲ್ಲಿ ಈ ಬಾರಿ ಸಂಭವಿಸಿದ ಭೂಕುಸಿತ ಯಾವುದೋ ಕಾಫಿ ತೋಟದಲ್ಲಿ ನಡೆದಿಲ್ಲ. ಬದಲಾಗಿ ಜನವಸತಿ ಇಲ್ಲದ ಗುಡ್ಡ ಪ್ರದೇಶದಲ್ಲಿಯೇ ಹೆಚ್ಚಾಗಿ ಸಂಭವಿಸಿದೆ. ಅಂದರೆ ಜೆಸಿಬಿ ಮಾತ್ರ ಇದಕ್ಕೆ ಕಾರಣ ಎನ್ನುವಂತಿಲ್ಲ. ಇಡೀ ಗುಡ್ಡವೇ ಜಾರುವ ಪ್ರಕ್ರಿಯೆ ನೋಡಿದರೆ ಭೂತಳದಲ್ಲಿ ಏನೋ ಆಗುತ್ತಿದೆ ಎನಿಸುತ್ತಿದೆ. ಕಾಡು ಬೋಳಾಗಿ, ನೀರು ಹಿಡಿದಿಟ್ಟುಕೊಳ್ಳದೆ, ಮಣ್ಣಿನ ಸಹಿತ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ನೀರಿನ ಕಾರಣದಿಂದ ಇದೆಲ್ಲ ಸಂಭವಿಸುತ್ತಿದೆ ಎಂಬ ಹಳೆಯ ವಾದವನ್ನು ಪುನಃ ಪರಿಶೀಲಿಸಬೇಕಿದೆ. ಬದಲಾಗಿ ಇನ್ನಾವುದೋ ಕಾರಣ ಇಲ್ಲಿರುವ ಸಾಧ್ಯತೆಯೇ ಹೆಚ್ಚಿದೆ.

ಜನ ಕಾಡು ಕಡಿದಿದ್ದಕ್ಕಿಂತ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಮಾಡುತ್ತಿರುವ ಕಾಮಗಾರಿಗಳ ಬಗ್ಗೆ ಆಲೋಚಿಸಬೇಕಿದೆ. ಕುರುಚಲು ಕಾಡೆಲ್ಲವನ್ನೂ ಕಡಿದು ಬೋಳುಗುಡ್ಡವನ್ನೂ ಸೇರಿಸಿ ಅಕೇಶಿಯಾ, ನೀಲಗಿರಿ ಪ್ಲಾಂಟೇಶನ್‌ ಮಾಡುವ ದೊಡ್ಡ ದಂಧೆ ಕೂಡ ಹಳೆಯ ಕಾರಣ. ಇದರ ನಡುವೆ ಇಲಾಖೆ ಕಾಡಿಗೆ ಸುರಿಯುತ್ತಿರುವ ರಾಸಾಯನಿಕ ಗೊಬ್ಬರದ ಲೆಕ್ಕವನ್ನು ಯಾರೂ ಇಡುತ್ತಿಲ್ಲ. ಈಗಲೂ ಅರಣ್ಯ ಇಲಾಖೆ ತಾನು ನೆಡುವ ಗಿಡಕ್ಕೆ ರಾಸಾಯನಿಕ ಗೊಬ್ಬರ ಹಾಕುವ ದೊಡ್ಡ ಯೋಜನೆಯನ್ನೇ ಹೊಂದಿದೆ. ಇದು ಇಡೀ ಪ್ರದೇಶದ ಮೇಲೆ ಬೀರುತ್ತಿರುವ ಪರಿಣಾಮವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ಬಿದ್ದ ಮಳೆಯ ನೀರು ಪ್ರಕೃತಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿ ಭೂಮಿಯೊಳಗೆ ಸೇರುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾಡಿನಲ್ಲಿ ಪ್ರಕೃತಿ ಬೆಳೆಸುತ್ತಿದ್ದ ಪಾಚಿಯೊಂದು ಇದನ್ನು ನಿಯಂತ್ರಿಸುತ್ತಿತ್ತು. ಆದರೆ ಇದೀಗ ಆ ಪಾಚಿ ಇಲ್ಲವಾಗುತ್ತಿದೆ. ಇದು ಆಳದಲ್ಲಿ ಸಂಗ್ರಹವಾಗಬೇಕಿದ್ದ ಅಂತರ್ಜಲದ ಬದಲಿಗೆ ಗುಡ್ಡದ ಸ್ವಲ್ಪ ಆಳದಲ್ಲಿನ ಕೆಲವು ಪದರದ ಕೆಳಗೆ ಉಂಡೆ ಕಲ್ಲಿರುವ ಭಾಗದಲ್ಲಿ ಸಂಗ್ರಹವಾಗುತ್ತಿದೆ. ಉಂಡೆಕಲ್ಲನ್ನು ಸೇರಿಸಿಕೊಂಡು ಕೆಸರು ಸಿದ್ಧವಾಗುತ್ತದೆ. ಆಗ ಇಡೀ ಗುಡ್ಡದ ಬುಡವೇ ಸಲೀಸಾಗಿ ಇನ್ನೊಂದು ಪ್ರದೇಶದ ಜಾರುತ್ತದೆ ಎಂಬ ವಾದ ಕೇಳಿ ಬರುತ್ತಿದೆ.

ಕೊಳವೆ ಬಾವಿಗಳೇ ಮಾರಕವಾದವೆ?

ಮಲೆನಾಡಿನಲ್ಲಿ ಭಾರೀ ಸಂಖ್ಯೆಯಲ್ಲಿ ತೆಗೆಯುತ್ತಿರುವ ಕೊಳವೆ ಬಾವಿ ಕೂಡ ತಳದಿಂದ ಗಟ್ಟಿಯಾಗಿ ಕುಳಿತ ಗುಡ್ಡವೊಂದು ಅಲುಗಾಡಲು ಕಾರಣವಾಗುತ್ತಿರಬಹುದು. ನೆಲಮಟ್ಟದಿಂದ ಸುಮಾರು 300-500 ಅಡಿ ಅಳದಲ್ಲಿ ಹೊಸ ವಿದ್ಯಮಾನವೊಂದಕ್ಕೆ ಈ ಕೊಳವೆ ಬಾವಿ ಕಾರಣವಾಗುತ್ತಿರಬಹುದು. ಇಷ್ಟುಅಡಿಯವರೆಗೆ ಕೊಳವೆ ಬಾವಿ ತೆಗೆಯುವ ಸಂದರ್ಭದಲ್ಲಿ ಆ ಯಂತ್ರ ಮಾಡುವ ಪ್ರಹಾರಕ್ಕೆ ಭೂಮಿ ಸಡಿಲಗೊಂಡಿರುತ್ತದೆ. ಭೂಮಿಯಾಳದಲ್ಲಿ ಸಂಗ್ರಹಗೊಂಡ ನೀರು ಈ ಕೊಳವೆ ಬಾವಿಗಳ ಮೂಲಕ ಮೇಲ್ಮಟ್ಟದವರೆಗೆ ಬಂದು ಎಲ್ಲ ಕಡೆ ಮಣ್ಣು ಸಡಿಲಗೊಳಿಸುವ ಪ್ರಕ್ರಿಯೆಯನ್ನು ನಿರಂತವಾಗಿ ಮಾಡುತ್ತಿದೆ. ದೀರ್ಘ ಕಾಲದಲ್ಲಿ ನಡೆಯುವ ಈ ಎಲ್ಲ ಪ್ರಕ್ರಿಯೆ ಮಲೆನಾಡಿನ ಗುಡ್ಡವನ್ನು ಸಡಿಲಗೊಳಿಸಿ ಅಪಾಯದ ಸ್ಥಿತಿಗೆ ನೂಕಿದೆಯೇನೊ ಎಂಬಂತೆ ಕಾಣುತ್ತಿದೆ.

ವಿಚಿತ್ರ ಶಬ್ದ ಎಲ್ಲಿಂದ ಬರುತ್ತಿದೆ?

ಇದರ ಜೊತೆಗೆ ಮಲೆನಾಡಿನ ಕೆಲ ಪ್ರದೇಶದಲ್ಲಿ ಭೂಮಿಯಾಳದಿಂದ ವಿಚಿತ್ರ ಶಬ್ದವೊಂದು ಕೇಳಿ ಬರುತ್ತಿದ್ದು, ಇದಕ್ಕೆ ಸ್ಪಷ್ಪ ಕಾರಣ ಗೊತ್ತಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಕೊಪ್ಪ ಸಮೀಪದ ಗುಡ್ಡೆತೋಟ ಮತ್ತಿತರ ಗ್ರಾಮಗಳಲ್ಲಿ ಪದೇ ಪದೇ ಭಾರೀ ಶಬ್ದ ಕೇಳಿ ಬರುತ್ತಿತ್ತು. ಈ ವರ್ಷ ಕಳಸ ಭಾಗದಲ್ಲಿ ಇದೇ ರೀತಿಯ ಶಬ್ದ ಕೇಳಿ ಬರುತ್ತಿದೆ.

ಅದೇನೇ ಇದ್ದರೂ ಈ ಕುರಿತು ವೈಜ್ಞಾನಿಕವಾಗಿ ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ಹಾಗೂ ಅಧ್ಯಯನ ನಡೆಯಬೇಕಿದೆ. ಭೂಗರ್ಭ ತಜ್ಞರನ್ನು ಕರೆಸಿ ಸರ್ಕಾರವೇ ಅಧ್ಯಯನಕ್ಕೆ ಮುಂದಾಗಬೇಕಿದೆ. ಎಲ್ಲದಕ್ಕೂ ಮಲೆನಾಡಿನ ಮಂದಿಯ ಮೇಲೆಯೇ ಗೂಬೆ ಕೂರಿಸುವ ಬದಲು ಸತ್ಯ ಸಂಗತಿ ಹೊರಬರಬೇಕಿದೆ.