ಶ್ರೀನಗರ[ಆ.21]: ಇದೇ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನ ಹೊಡೆದುರುಳಿಸಿದ ಹೀರೋ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರ ಕೊರಳುಪಟ್ಟಿಹಿಡಿದು ಎಳೆದೊಯ್ದು, ಭಾರೀ ಚಿತ್ರಹಿಂಸೆ ನೀಡಿ ಸುದ್ದಿಯಾಗಿದ್ದ ಪಾಕಿಸ್ತಾನ ಯೋಧ ಅಹ್ಮದ್‌ ಖಾನ್‌ನನ್ನು ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.

ಪಾಕಿಸ್ತಾನ ಸೇನೆಯ ವಿಶೇಷ ತಂಡದಲ್ಲಿ ಸುಬೇದಾರ್‌ ಆಗಿದ್ದ ಅಹ್ಮದ್‌ ಖಾನ್‌ನನ್ನು ಆ.17ರಂದು ಗಡಿ ರೇಖೆಯಲ್ಲಿರುವ ನಕ್ಯಾಲ್‌ ಸೆಕ್ಟರ್‌ನಲ್ಲಿ ಭಾರತೀಯ ಯೋಧರು ನಡೆಸಿದ ಗುಂಡಿನ ದಾಳಿ ವೇಳೆ ಅಹ್ಮದ್‌ ಖಾನ್‌ ಸಾವಿಗೀಡಾಗಿದ್ದಾನೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆ.17ರಂದು ಉಗ್ರರಿಗೆ ಭಾರತದ ಗಡಿ ನುಸುಳಲು ಅನುಕೂಲವಾಗುವಂತೆ ಪಾಕಿಸ್ತಾನ ಯೋಧರು ಭಾರತದ ಪಡೆಗಳನ್ನು ಗುರಿಯಾಗಿಸಿ ಪೂಂಛ್‌ನ ಕೃಷ್ಣಾಘಾಟಿ ಸೆಕ್ಟರ್‌ನಲ್ಲಿ ಶೆಲ್‌ ಹಾಗೂ ಬಾಂಬ್‌ ದಾಳಿ ನಡೆಸಿತು. ಈ ವೇಳೆ ಭಾರತದ ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಪಾಕ್‌ ಯೋಧ ಅಹ್ಮದ್‌ ಖಾನ್‌ ಸಾವನ್ನಪ್ಪಿದ್ದಾನೆ.

ವಿಂಗ್ ಕಮಾಂಡರ್ ಅಭಿನಂದನ್ ಯಾರು? ಇಲ್ಲಿದೆ ಧೀರ ಯೋಧನಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳು

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ನಿಟ್ಟಿನಲ್ಲಿ ಪಾಕಿಸ್ತಾನವು ಅಹ್ಮದ್‌ ಖಾನ್‌ ಮೂಲಕ ಭಾರತದೊಳಕ್ಕೆ ಉಗ್ರರನ್ನು ನುಸುಳಿಸುವ ಕೃತ್ಯದಲ್ಲಿ ಸಕ್ರಿಯವಾಗಿತ್ತು. ಈ ಪ್ರಕಾರ ಅಹ್ಮದ್‌ ಖಾನ್‌ ನೌಶೇರಾ, ಸುಂದರ್‌ಬನಿ ಹಾಗೂ ಪಲ್ಲನ್‌ ವಾಲಾ ಸೆಕ್ಟರ್‌ಗಳ ಮೂಲಕ ಉಗ್ರರು ಭಾರತದ ಗಡಿಯೊಳಕ್ಕೆ ನುಸುಳಲು ಅಗತ್ಯವಿರುವ ಎಲ್ಲಾ ನೆರವನ್ನೂ ನೀಡುತ್ತಿದ್ದ.