ಕರಾಚಿ[ಸೆ.18]: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ವೈದ್ಯಕಿಯ ಕಾಲೇಜು ಹಾಸ್ಟೆಲ್ ಒಂದರಲ್ಲಿ ನೇಣು ಬಿಗಿದ ರೀತಿಯಲ್ಲಿ ಹಿಂದೂ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ಹತ್ಯೆ ಶಂಕೆ ವ್ಯಕ್ತವಾಗಿತ್ತು. ಇದೀಗ ಪ್ರಕರಣ ಸಂಬಂಧ ಪಾಕಿಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವಂತೆ ಕೂಗಿ ಜನರು ಬೀದಿಗಿಳಿದಿದ್ದಾರೆ. 

ಪಾಕಿಸ್ತಾನದಲ್ಲಿ #JusticeForNimrita ಎಂಬ ಹ್ಯಾಷ್ ಟ್ಯಾಗ್ ಟಾಪ್ ಟ್ರೆಂಡ್ ಆಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕರಾಚಿಯ ಬೀದಿ ಬೀದಿಗಳಲ್ಲೂ ಜನರು ಈ ಸಾವಿನ ವಿರುದ್ಧ ಪ್ರತಿಭಟಿಸುತ್ತಿದ್ದು, ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. 

ಪಾಕಿಸ್ತಾನದ ಹಾಸ್ಟೆಲ್‌ನಲ್ಲಿ ಹಿಂದು ವಿದ್ಯಾರ್ಥಿನಿಯ ಶವ ಪತ್ತೆ: ಕೊಲೆ ಶಂಕೆ!

ವಿದ್ಯಾರ್ಥಿನಿ ಹತ್ಯೆ ಸಂಬಂಧ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಇದೀಗ ಪ್ರಕರಣ ಸಂಬಂಧ ಕರಾಚಿಯ ಬೀದಿ ಬೀದಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ ಎಂದು ವರದಿಗಳು ತಿಳಿಸಿವೆ. 

ಯಾರು ಈ ವಿದ್ಯಾರ್ಥಿನಿ? ಆಕೆಗೇನಾಗಿತ್ತು?

ನಮ್ರತಾ ಚಾಂದಿನಿ ಮೃತ ವಿದ್ಯಾರ್ಥಿನಿ. ಲರ್ಕಾನ್‌ ಜಿಲ್ಲೆಯ ನಿವಾಸಿಯಾಗಿರುವ ನಮ್ರತಾ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಳು. ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಳು.

ಚಾಂದಿನಿ ಕೊರಳಿಗೆ ಕೇಬಲ್‌ ವೈಯರ್‌ ಸುತ್ತಿದ್ದ, ಕೈಗಳನ್ನು ಬಲವಾಗಿ ಹಿಡಿದ ಗುರುತುಗಳಿವೆ. ಕೊಲೆ ನಡೆದಿರುವ ಶಂಕೆ ಇದೆ ಎಂದು ಅವಳ ಸಹೋದರ ವಿಶಾಲ್‌ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಿನ್ಸಿಪಾಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.