ನವದೆಹಲಿ[ಮಾ.26]: ಭಾರತದೊಂದಿಗಿನ ಬಾಂಧವ್ಯ ವೃದ್ಧಿಸಿಕೊಳ್ಳಲು ಪಾಕಿಸ್ತಾನ ಸರ್ಕಾರ ಕಾಶ್ಮೀರಿ ಪಂಡಿತರ ಬಹುಕಾಲದ ಬೇಡಿಕೆಯಾಗಿದ್ದ ಶಾರದಾ ಪೀಠ ಕಾರಿಡಾರ್‌ಗೆ ಒಪ್ಪಿಗೆ ನೀಡಿದೆ. ಇತ್ತೀಚೆಗಷ್ಟೇ ಸಿಖ್ಖರ ಪವಿತ್ರ ಸ್ಥಳ ಕರ್ತಾರ್‌ಪುರಕ್ಕೆ ಪಂಜಾಬ್‌ನಿಂದ ಕಾರಿಡಾರ್‌ ನಿರ್ಮಿಸಲು ಒಪ್ಪಿಗೆ ನೀಡಿದ್ದ ಪಾಕಿಸ್ತಾನ ಇದೀಗ ಕಾಶ್ಮೀರಿ ಹಿಂದುಗಳ ಕುಲದೇವತೆಯಾಗಿರುವ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಶಾರದೆಯ ಪವಿತ್ರ ಸ್ಥಳಕ್ಕೆ ಕಾರಿಡಾರ್‌ ನಿರ್ಮಿಸಲು ಅನುಮತಿ ನೀಡಿರುವುದು ಭಾರತಕ್ಕೆ ಸಂತಸ ತಂದಿದೆ.

‘ಶಾರದಾ ಪೀಠಕ್ಕೆ ಕಾರಿಡಾರ್‌ ನಿರ್ಮಿಸಲು ಪಾಕಿಸ್ತಾನ ಒಪ್ಪಿಗೆ ನೀಡಿರುವುದರಿಂದ ಕಾಶ್ಮೀರಿ ಪಂಡಿತರಿಗೆ ಅನುಕೂಲವಾಗಲಿದೆ. ಇದರಿಂದ ಉಭಯ ದೇಶಗಳ ನಡುವೆ ನಿರ್ಮಾಣವಾಗಿರುವ ಬಿಗುವಿನ ಪರಿಸ್ಥಿತಿ ತಿಳಿಗೊಳ್ಳಲು ಕೂಡ ಸಹಾಯವಾಗಲಿದೆ’ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸ್ವಾಗತಿಸಿದ್ದಾರೆ.

ಪಿಒಕೆಯ ನೀಲಂ (ಕಿಶನ್‌ಗಂಗಾ) ನದಿಯ ಕಣಿವೆಯಲ್ಲಿ 5000 ವರ್ಷಗಳಷ್ಟುಹಳೆಯ ಶಾರದಾ ದೇವಸ್ಥಾನ ಹಾಗೂ ಅದರ ಪಕ್ಕದಲ್ಲೇ ಶಾರದಾ ವಿಶ್ವವಿದ್ಯಾಲಯದ ಪಳೆಯುಳಿಕೆಗಳಿವೆ. ಗಡಿ ನಿಯಂತ್ರಣ ರೇಖೆಯ ಬಳಿಯಿರುವ, ಮುಜಾಫರಾಬಾದ್‌ನಿಂದ (ಪಿಒಕೆ ರಾಜಧಾನಿ) 160 ಕಿ.ಮೀ. ದೂರದಲ್ಲಿರುವ ಶಾರ್ದಿ ಅಥವಾ ಸರ್ದಿ ಎಂಬ ಪುಟ್ಟಹಳ್ಳಿಯಲ್ಲಿ ಈ ಸ್ಥಳವಿದೆ. ಇದು ನೀಲಂ ನದಿಯು ಮಧುಮತಿ ಮತ್ತು ಸರ್ಗುಣ್‌ ನದಿಯನ್ನು ಸೇರುವ ಸಂಗಮ ಸ್ಥಳವಾಗಿದೆ.

ಕಾಶ್ಮೀರಿ ಪಂಡಿತರು ಶಾರದೆಯನ್ನು ಕುಲದೇವತೆ ಎಂದು ಪೂಜಿಸುತ್ತಾರೆ. ಶಾರದೆಯ ಮೂಲ ಸ್ಥಾನವೇ ಪಿಒಕೆಯಲ್ಲಿರುವ ಶಾರದಾ ಪೀಠ ಎಂದು ಅವರು ನಂಬಿದ್ದಾರೆ. ಅಲ್ಲಿ ಕ್ರಿ.ಪೂ. 237ರಲ್ಲಿ ಅಶೋಕ ಚಕ್ರವರ್ತಿಯು ಶಾರದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದ. ಅದು ಈಗ ನಾಶವಾಗಿದೆ. ಶಾರದೆಯ ದೇವಸ್ಥಾನ ಮಾತ್ರ ಜೀರ್ಣ ಸ್ಥಿತಿಯಲ್ಲಿದೆ.

ಕರ್ತಾರ್‌ಪುರ ಕಾರಿಡಾರನ್ನು ಪಂಜಾಬ್‌ನ ಸಿಖ್‌ ಯಾತ್ರಿಕರಿಗೆ ತೆರೆಯಬೇಕು ಎಂಬ ಮಾತುಕತೆ ಆರಂಭವಾದಾಗಲೇ ಶಾರದಾ ಪೀಠಕ್ಕೆ ಕಾರಿಡಾರ್‌ ನಿರ್ಮಿಸುವ ಮಾತುಕತೆಯೂ ಆರಂಭವಾಗಿತ್ತು. ಕಾರಿಡಾರ್‌ ನಿರ್ಮಾಣವಾದರೆ ಶಾರದಾ ಪೀಠಕ್ಕೆ ಭಾರತದ ಹಿಂದುಗಳು ಹೆಚ್ಚಿನ ಅಡೆತಡೆಗಳಿಲ್ಲದೆ ಸುಲಭವಾಗಿ ಮತ್ತು ಹತ್ತಿರದ ಮಾರ್ಗದಲ್ಲಿ ಹೋಗಿ ಬರಬಹುದು.

ಏನು ಪ್ರಯೋಜನ?

ಕಾಶ್ಮೀರಪುರವಾಸಿನಿ ಎಂದು ಶಾರದೆಗೆ ಹೆಸರು ಬಂದಿದ್ದೇ ಶಾರದಾಪೀಠದಿಂದ. ಕಾಶ್ಮೀರಿ ಪಂಡಿತರಿಗೆ ಇಲ್ಲಿನ ಶಾರದೆಯೇ ಕುಲದೇವತೆ. ದೇಶ ವಿಭಜನೆ ನಂತರ ಅವರಿಗೆ ಶಾರದಾಪೀಠದ ಭೇಟಿ ನಿಷಿದ್ಧವಾಗಿತ್ತು. ವಾಜಪೇಯಿ ಪ್ರಧಾನಿಯಾಗಿದ್ದಾಗ ಇಲ್ಲಿಗೆ ಕಾಶ್ಮೀರದಿಂದ ನೇರ ಕಾರಿಡಾರ್‌ ನಿರ್ಮಿಸುವ ಬೇಡಿಕೆ ಆರಂಭವಾಯಿತು. ಕಾರಿಡಾರ್‌ ನಿರ್ಮಾಣವಾದ ನಂತರ ಕಾಶ್ಮೀರಿ ಹಿಂದುಗಳು ಇಲ್ಲಿಗೆ ವೀಸಾ ಇಲ್ಲದೆ ಹೋಗಿ ಬರಬಹುದು. ಕಾಶ್ಮೀರದಿಂದ ಇದು ಕೇವಲ 130 ಕಿ.ಮೀ. ದೂರವಿದೆ.

ಶೃಂಗೇರಿ ಪೀಠದಿಂದಲೂ ಮನವಿ ಸಲ್ಲಿಕೆ ಆಗಿತ್ತು.

2018ರ ಅಕ್ಟೋಬರ್‌ನಲ್ಲಿ ಶೃಂಗೇರಿ ಮಠದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಯೊಂದನ್ನು ರವಾನಿಸಲಾಗಿತ್ತು. ಅದರಲ್ಲಿ ಪಾಕಿಸ್ತಾನದಲ್ಲಿರುವ ಶಾರದಾ ಪೀಠಕ್ಕೆ ಭಕ್ತರು ತೆರಳಲು ಅವಕಾಶ ಮಾಡಿಕೊಡಬೇಕು ಎಂದು ಕೋರಿಕೆ ಸಲ್ಲಿಸಲಾಗಿತ್ತು.