ತಿರುವನಂತಪುರಂ(ಜ.27): ದೇಶದ ಬಾಹ್ಯಾಕಾಶ ರಹಸ್ಯಗಳನ್ನು ಬೇರೆ ದೇಶಕ್ಕೆ ಮಾರಾಟ ಮಾಡಲೆತ್ನಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿರುವುದು ವಿವಾದ ಹುಟ್ಟುಹಾಕಿದೆ.

ಇಸ್ರೋ ಗೂಢಚಾರಿಕೆ: 24 ವರ್ಷಗಳ ಬಳಿಕ ಹಿರಿಯ ವಿಜ್ಞಾನಿಗೆ ‘ಸುಪ್ರೀಂ ನ್ಯಾಯ’!

ಇದೊಂದು ಆಘಾತಕಾರಿ ನಿರ್ಧಾರ ಎಂದು ಹೇಳಿರುವ ಕೇರಳದ ನಿವೃತ್ತ ಡಿಜಿಪಿ ಟಿ.ಪಿ.ಸೇನ್‌ಕುಮಾರ್‌, ‘ಯಾವ ಆಧಾರದ ಮೇಲೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೋ ಗೊತ್ತಿಲ್ಲ. ಇದು ವಿಷವನ್ನು ಅಮೃತದ ಜೊತೆ ಸೇರಿಸಿದಂತೆ. ಇಸ್ರೋದ ಗೂಢಚರ್ಯೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್‌ ಏಕವ್ಯಕ್ತಿ ಆಯೋಗ ರಚಿಸಿದೆ. ಈ ಹಂತದಲ್ಲಿ ನಂಬಿ ನಾರಾಯಣನ್‌ ಅವರ ಹೆಸರನ್ನು ಪರಿಗಣಿಸಬಾರದಿತ್ತು. ಅವರ ಹೆಸರು ಸೂಚಿಸಿದವರು ಮುಂದೆ ಇದಕ್ಕೆ ವಿವರಣೆ ನೀಡಬೇಕಾಗುತ್ತದೆ’ ಎಂದು ಕಿಡಿಕಾರಿದ್ದಾರೆ.

ಶಶಿ ತರೂರ್‌ ವಿರುದ್ಧ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್‌ ಸ್ಪರ್ಧೆ?

ದೇಶಕ್ಕೆ ಅವರ ಕೊಡುಗೆ ಏನು? ಅವರೊಬ್ಬ ಸಾಮಾನ್ಯ ವಿಜ್ಞಾನಿ. ಇಸ್ರೋದಿಂದ ತಾವೇ ನಿವೃತ್ತಿ ಪಡೆದರು. ಅವರ ಬದಲು ಒಬ್ಬ ಯುವ ವಿಜ್ಞಾನಿಗೆ ಪ್ರಶಸ್ತಿ ನೀಡಿದ್ದರೆ ಸಂತೋಷವಾಗುತ್ತಿತ್ತು. ಇಸ್ರೋದ ಗೂಢಚರ್ಯೆ ಪ್ರಕರಣ ಸರಿಯಾಗಿ ತನಿಖೆಯಾಗಿಲ್ಲ ಎಂದೇ ನನಗೆ ಈಗಲೂ ಅನ್ನಿಸುತ್ತದೆ ಎಂದು ಕೇರಳದಲ್ಲಿ ದಕ್ಷ ಪೊಲೀಸ್‌ ಅಧಿಕಾರಿ ಎಂದು ಹೆಸರು ಗಳಿಸಿದ್ದ ಸೇನ್‌ಕುಮಾರ್‌ ಹೇಳಿದ್ದಾರೆ.

ಪದ್ಮ ಪ್ರಶಸ್ತಿಯ ಮೂಲಕ ನಾನು ಪ್ರಾಮಾಣಿಕ ಎಂಬುದು ಸಾಬೀತಾದಂತಾಗಿದೆ. ನನ್ನ ಮೇಲೆ ಗೂಢಚರ್ಯೆ ನಡೆಸಿದ ಅಪವಾದವಿತ್ತು. ಈಗ ಈ ಬಹುಮಾನದಿಂದ ನನ್ನ ಸಾಧನೆಯನ್ನು ಗುರುತಿಸಲಾಗಿದೆ ಎಂಬ ಭಾವನೆ ಮೂಡುತ್ತಿದೆ.

     - ನಂಬಿ ನಾರಾಯಣನ್‌, ಮಾಜಿ ಇಸ್ರೋ ವಿಜ್ಞಾನಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಕ್ರಯೋಜೆನಿಕ್‌ ವಿಭಾಗದ ಮುಖ್ಯಸ್ಥರಾಗಿದ್ದ ನಂಬಿ ನಾರಾಯಣನ್‌ ಅವರನ್ನು ಇನ್ನೊಬ್ಬ ವಿಜ್ಞಾನಿ ಶಶಿಕುಮಾರ್‌ ಜೊತೆ 1994ರಲ್ಲಿ ಗೂಢಚರ್ಯೆ ಆರೋಪದ ಮೇಲೆ ಬಂಧಿಸಲಾಗಿತ್ತು. ವಿದೇಶಿಗರಿಗೆ ಬಾಹ್ಯಾಕಾಶದ ರಹಸ್ಯಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಅವರೊಂದಿಗೆ ಇಬ್ಬರು ಮಾಲ್ಡೀವ್ಸ್’ನ ಮಹಿಳೆಯರನ್ನೂ ಬಂಧಿಸಲಾಗಿತ್ತು. ನಂತರ ಸುದೀರ್ಘ ಕಾನೂನು ಸಮರ ನಡೆದು, ಸುಪ್ರೀಂಕೋರ್ಟ್‌ ನಂಬಿ ನಾರಾಯಣನ್‌ ಅವರನ್ನು ಆರೋಪಮುಕ್ತಗೊಳಿಸಿ ಅವರಿಗೆ ಕೇರಳ ಸರ್ಕಾರ 50 ಲಕ್ಷ ರು. ಪರಿಹಾರ ನೀಡಬೇಕೆಂದು ಆದೇಶಿಸಿತ್ತು. ನಂತರ ಈ ಪ್ರಕರಣದ ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿಗಳ ವಿರುದ್ಧವೇ ತನಿಖೆ ನಡೆಸುವಂತೆ ಆದೇಶಿಸಿತ್ತು. ಇಸ್ರೋ ಗೂಢಚರ್ಯೆ ಪ್ರಕರಣದ ಕುರಿತು ಹಲವಾರು ಪುಸ್ತಕಗಳು ಹಾಗೂ ಸಿನಿಮಾಗಳು ಬಂದಿವೆ. ನಂಬಿ ನಾರಾಯಣ್‌ಗೆ ಶುಕ್ರವಾರ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಿದೆ.