ಚಂಡೀಘಡ್(ಅ.25): ಹರಿಯಾಣದಲ್ಲಿ ಶತಾಯಗತಾಯ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿರುವ ಬಿಜೆಪಿ, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಆಕ್ರೋಶ ಎದುರಿಸಬೇಕಾಗಿ ಬಂದಿದೆ.

ಸರ್ಕಾರ ರಚಿಸಲು ಬೇಕಾದ ಬೆಂಬಲ ಪಡೆಯಲು ಪ್ರಯತ್ನಿಸುತ್ತಿರುವ ಬಿಜೆಪಿ, ಪಕ್ಷೇತರ ಶಾಸಕರ ಬೆಂಬಲ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಅನ್ಯರ ಬೆಂಬಲಿದಂದ ಸರ್ಕಾರ ರಚನೆಯ ಹಕ್ಕು ಮಂಡಿಸಲು ಬಿಜೆಪಿ ಸಿದ್ಧವಾಗಿದೆ.

ಆದರೆ ಬಿಜೆಪಿಗೆ ಬೆಂಬಲ ನೀಡಿದವರ ಪೈಕಿ ಗಗನಸಖಿ ಮೇಲೆ ಅತ್ಯಾಚಾರ ಮಾಡಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿರುವ ಆರೋಪ ಎದುರಿಸುತ್ತಿರುವ ಹರಿಯಾಣ ಲೋಕಹಿತ್ ಪಾರ್ಟಿ(HLP)ಶಾಸಕ ಗೋಪಾಲ್ ಕಂದಾ ಕೂಡ ಒಬ್ಬರಾಗಿದ್ದಾರೆ.

2012ರಲ್ಲಿ ಗೋಪಾಲ್ ಕಂದ ಒಡೆತನದ ಖಾಸಗಿ ಏರ್‌ಲೈ ನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಗನಸಖಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮ ಆತ್ಮಹತ್ಯೆ ಪತ್ರದಲ್ಲಿ ಆಕೆ ಕಂದಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಅಲ್ಲದೇ 2014ರಲ್ಲಿ ಗಗನಸಖಿಯ ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಅವರೂ ಕೂಡ ತಮ್ಮ ಆತ್ಮಹತ್ಯೆಗೆ ಕಂದಾ ಅವರ ಮಾನಸಿಕ ಕಿರುಕುಳವೇ ಕಾರಣ ಎಂದು ತಿಳಿಸಿದ್ದರು.

ಅದಾಗ್ಯೂ ಕಂದಾ ಅತ್ಯಾಚಾರ ಆರೋಪದಿಂದ ಮುಕ್ತರಾಗಿದ್ದರೂ, ಆತ್ಮಹತ್ಯೆಗೆ ಪ್ರೆರೇಪಿಸಿದ ಆರೋಪ ಎದುರಿಸುತ್ತಿದ್ದಾರೆ. ಇಂತಹ ವಿವಾದಾತ್ಮಕ ವ್ಯಕ್ತಿಯ ಬೆಂಬಲ ಪಡೆದಿರುವ ಬಿಜೆಪಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುವ ಮೋದಿ ಸರ್ಕಾರ, ಅಧಿಕಾರಕ್ಕಾಗಿ ಅತ್ಯಾಚಾರ ಆರೋಪಿಗಳೊಂದಿಗೆ ಸೇರಿರುವುದು ನಿಜಕ್ಕೂ ಅಸಹ್ಯಕರ ಎಂದು ಹಲವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.