ನವದೆಹಲಿ(ಫೆ.28): ಭಾರತ-ಪಾಕ್ ನಡುವಿನ ಸಂಬಂಧ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಯುದ್ಧದ ಆತಂಕ ಮನೆ ಮಾಡಿದೆ. ಈ ಮಧ್ಯೆ ದೇಶದ ರಾಜಕೀಯ ವಲಯದಲ್ಲಿ ತೀವ್ರತರ ಚಟುವಟಿಕೆಗಳು ನಡೆಯುತ್ತಿದ್ದು, ಕ್ಷಿಷ್ಟಕರ ಪರಿಸ್ಥಿತಿ ಎದುರಿಸಲು ದೇಶ ಒಂದಾಗಿದೆ.

ಬಿಗುವಿನ ವಾತಾವರಣ ನಿಭಾಯಿಸಲು ತಾವು ಸರ್ಕಾರ, ಸೇನೆ ಮತ್ತು ದೇಶದ ಜನರೊಂದಿಗೆ ಇರುವುದಾಗಿ ಈಗಾಗಲೇ ವಿಪಕ್ಷಗಳು ಘೋಷಿಸಿವೆ. ಅದರಂತೆ ಕೇಂದ್ರ ಸರ್ಕಾರ ಕೂಡ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೇಶವನ್ನು ಒಗ್ಗೂಡಿಸುವಲ್ಲಿ ಯಶಸ್ಸು ಕಂಡಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮೇಲಿನ ತಮ್ಮ ಅಸಮಾಧಾನವನ್ನು ಮತ್ತೆ ಹೊರಹಾಕಿರುವ ವಿಪಕ್ಷಗಳು, ಬಿಜೆಪಿ ಕಾರ್ಯಕರ್ತರೊಂದಿಗಿನ ಪ್ರಧಾನಿ ಮೋದಿ ಅವರ ಇಂದಿನ ಸಭೆಗೆ ಆಕ್ಷೇಪ ವ್ಯಕ್ತಪಡಿಸಿವೆ.

ಪ್ರಧಾನಿ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಎಲ್ಲಾ ವಿಪಕ್ಷಗಳು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸರ್ಕಾರದ ಜೊತೆ ನಿಲ್ಲುವ ನಿರ್ಧಾರ ಕೈಗೊಂಡಿದ್ದರೆ, ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಲು ಮುಂದಾಗಿರುವುದು ಆಶ್ಚರ್ಯ ತಂದಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಪ್ರಧಾನಿ ಮೋದಿ ಇಂದು ಬಿಜೆಪಿಯ ಸುಮಾರು 1 ಕೋಟಿ ಕಾರ್ಯಕರ್ತರೊಂದಿಗೆ ಬೃಹತ್ ವಿಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ. 'ಮೇರಾ ಬೂತ್ ಸಬ್ಸೆ ಮಜ್ಬೂತ್' ಹೆಸರಿನ ಈ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ಮೋದಿ ಸಂವಾದ ನಡೆಸಲಿದ್ದಾರೆ.