Asianet Suvarna News Asianet Suvarna News

ಇಂಗ್ಲಿಷ್‌ ಮಾಧ್ಯಮ ವಿರುದ್ಧ ಭಾರಿ ಚಳವಳಿ!

ಮುಂದಿನ ಶೈಕ್ಷ​ಣಿಕ ವರ್ಷ​ದಿಂದ ರಾಜ್ಯದ ಸುಮಾರು ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿ​ಸುವ ರಾಜ್ಯ ಸರ್ಕಾ​ರದ ನಿರ್ಧಾ​ರಕ್ಕೆ ಇದೀಗ ಕನ್ನಡ ಸಾರ​ಸ್ವತ ಲೋಕ​ದಿಂದ ಭಾರಿ ಪ್ರತಿ​ರೋಧ ಎದು​ರಾ​ಗಿದೆ. 

Oppose decision on English medium in Government schools
Author
Bengaluru, First Published Dec 20, 2018, 8:24 AM IST

ಬೆಂಗಳೂರು :  ಮುಂದಿನ ಶೈಕ್ಷ​ಣಿಕ ವರ್ಷ​ದಿಂದ ರಾಜ್ಯದ ಸುಮಾರು ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿ​ಸುವ ರಾಜ್ಯ ಸರ್ಕಾ​ರದ ನಿರ್ಧಾ​ರಕ್ಕೆ ಇದೀಗ ಕನ್ನಡ ಸಾರ​ಸ್ವತ ಲೋಕ​ದಿಂದ ಭಾರಿ ಪ್ರತಿ​ರೋಧ ಎದು​ರಾ​ಗಿದೆ. ಸರ್ಕಾ​ರದ ಈ ನೀತಿ ವಿರುದ್ಧ ಸಭೆ ಸೇರಿದ ಅಗ್ರ​ಗಣ್ಯ ಸಾಹಿ​ತಿ​ಗಳು ಹಾಗೂ ಹೋರಾ​ಟ​ಗಾ​ರರು, ಈ ನೀತಿ​ ಹಿಂಪ​ಡೆ​ಯ​ದಿ​ದ್ದರೆ ಗೋಕಾಕ್‌ ಮಾದರಿ ಚಳ​ವಳಿ ನಡೆ​ಸುವ ಎಚ್ಚ​ರಿ​ಕೆ​ಯನ್ನು ರಾಜ್ಯ ಸರ್ಕಾ​ರಕ್ಕೆ ನೀಡಿ​ದ್ದಾ​ರೆ.

ಕನ್ನಡ ಸಾಹಿತ್ಯ ಪರಿ​ಷತ್‌ ಅಧ್ಯಕ್ಷ ಡಾ. ಮನು ಬಳಿ​ಗಾರ ನೇತೃ​ತ್ವ​ದಲ್ಲಿ ಬುಧ​ವಾರ ಸಭೆ​ಯೊಂದನ್ನು ನಡೆ​ಸಿದ ನಾಡಿನ ಅಗ್ರ​ಗಣ್ಯ ಸಾಹಿ​ತಿ​ಗ​ಳಾದ ಜ್ಞಾನಪೀಠ ಪುರ​ಸ್ಕೃತ ಡಾ. ಚಂದ್ರ​ಶೇ​ಖರ್‌ ಕಂಬಾರ, ಎಸ್‌.ಎಲ್‌.ಭೈರಪ್ಪ, ಕರ್ನಾ​ಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾ​ಯ​ಣ​ಗೌಡ, ಸಾಹಿ​ತಿ​ಗ​ಳಾದ ಪ್ರೊ.ಚಂದ್ರಶೇಖರ ಪಾಟೀಲ, ಡಾ.ಸಿದ್ದಲಿಂಗಯ್ಯ ಮೊದ​ಲಾ​ದ​ವರು, ನಿಲು​ವು ಬದ​ಲಿ​ಸು​ವಂತೆ ಮುಖ್ಯ​ಮಂತ್ರಿ​ಯ​ವ​ರನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಧ​ರಿ​ಸಿ​ದರು.

ಸಭೆಯ ನಂತರ ಪತ್ರಿ​ಕಾ​ಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಈ ಮನ​ವಿಗೆ ಸರ್ಕಾರ ಸ್ಪಂದಿ​ಸ​ದಿ​ದ್ದರೆ ಹೋರಾಟದ ಮಾರ್ಗ​ವನ್ನು ಅನು​ಸ​ರಿ​ಸಲು ಸಭೆ​ಯಲ್ಲಿ ತೀರ್ಮಾ​ನಿ​ಸ​ಲಾ​ಗಿ​ದೆ ಎಂದ​ರು.

ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆ​ಗ​ಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿ​ಸುವ ಸರ್ಕಾರದ ನಿಲುವಿಗೆ ನಮ್ಮ ವಿರೋಧವಿದೆ. ಈ ಕುರಿತು ಸಾಹಿತಿಗಳು ಇಂದು ಸಭೆ ನಡೆಸಿದ್ದು, ಮೂರು ನಿರ್ಣಯಗಳನ್ನು ಕೈಗೊಂಡಿದ್ದೇವೆ. ಯಾವುದೇ ಕಾರಣಕ್ಕೂ ಸರ್ಕಾರ ಪ್ರಾಥಮಿಕ ಹಂತದಿಂದ ಇಂಗ್ಲಿಷ್‌ ಮಾಧ್ಯಮ ಶಾಲೆ ಪ್ರಾರಂಭ ಮಾಡಬಾರದು. ಕನ್ನಡ ಮಾಧ್ಯ​ಮ​ದಲ್ಲೇ ಇಂಗ್ಲಿಷ್‌ ಅನ್ನು ಒಂದು ಭಾಷೆ​ಯ​ನ್ನಾಗಿ ಕಲಿ​ಸ​ಬ​ಹುದು. ಅಂತೆಯೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲೂ ಕೂಡ ಕನ್ನಡವನ್ನು ಒಂದು ವಿಷಯವಾಗಿ ಕಲಿಸಬೇಕು. ಹಿಂದಿನ ಸರ್ಕಾರ ನೀಡಿದ್ದ ಭರವಸೆಯಂತೆ ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸಲು ಮೈತ್ರಿ ಸರ್ಕಾರ ಬದ್ಧವಾಗಿರಬೇಕು ಎಂಬ ನಿರ್ಣಯ ಕೈಗೊಂಡಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ನಿಯೋಗದೊಂದಿಗೆ ಭೇಟಿಯಾಗಿ ಪ್ರಸ್ತುತ ಕೈಗೊಂಡ ನಿರ್ಣಯಗಳ ಜಾರಿಗೆ ಆಗ್ರಹಿಸಬೇಕೆಂದು ತೀರ್ಮಾನಿಸಿರುವುದಾಗಿ ಹೇಳಿದರು.

ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್‌ ಪಾಟೀಲ್‌ ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡೇ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುವ ಮಾತು ಹೇಳಿದ್ದಾರೆ. ಬಹುಶಃ ಬೆಳಗಾವಿ ಅಧಿವೇಶನದಲ್ಲೇ ಅದನ್ನು ಕಾಯ್ದೆಯಾಗಿ ಜಾರಿ ತಂದರೂ ಆಶ್ಚರ್ಯವಿಲ್ಲ. ಸರ್ಕಾರದ ಈ ನಿರ್ಧಾರಕ್ಕೆ ಹೋರಾಟ ಪ್ರಾರಂಭ ಮಾಡುವುದು ಅನಿವಾರ್ಯ. ಅದಕ್ಕೆ ಮುಖ್ಯಮಂತ್ರಿಗಳೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ನಾಡಿನಲ್ಲಿ ಮಾತೃಭಾಷೆಗೆ ಮೊದಲ ಆದ್ಯತೆ. ಪ್ರಾಥಮಿಕ ಶಾಲೆಗಳಿಂದಲೇ ನಮ್ಮ ಮಕ್ಕಳಿಗೆ ಮಾತೃಭಾಷೆ ಕಲಿಸದಿದ್ದರೆ ಕನ್ನಡ ಉಳಿಯುವುದು ಹೇಗೆ ಸಾಧ್ಯ? ಸರ್ಕಾರ ಕೂಡಲೇ ತನ್ನ ನಿಲುವು ಬದಲಿಸಬೇಕು. ಇಲ್ಲದಿದ್ದರೆ ನಾಡು, ನುಡಿಗಾಗಿ ಈ ಹಿಂದೆ ನಡೆದ ಗೋಕಾಕ್‌ ಚಳವಳಿ ಮಾದರಿಯಲ್ಲೇ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಹಿರಿಯ ಕವಿ ಸಿದ್ದಲಿಂಗಯ್ಯ ಮಾತನಾಡಿ, ಸರ್ಕಾರ ಶಿಕ್ಷಣ ಮಾಧ್ಯಮದ ಕುರಿತು ಅನವಶ್ಯಕ ಗೊಂದಲ ಸೃಷ್ಟಿಸುತ್ತಿದೆ. ಶಿಕ್ಷಣ ಮಾಧ್ಯಮವನ್ನೇ ಇಂಗ್ಲಿಷ್‌ ಮಾಡುತ್ತೇನೆ ಎನ್ನುತ್ತಿರುವ ಸರ್ಕಾರಕ್ಕೆ ಶೈಕ್ಷಣಿಕ ಪರಿಜ್ಞಾನ ಇಲ್ಲ. ಈ ನಿಲುವಿನಿಂದ ಸರ್ಕಾರ ಹಿಂದೆ ಸರಿಯದಿದ್ದರೆ ದೊಡ್ಡ ಹೋರಾಟ ಎದುರಿಸಬೇಕಾಗುತ್ತದೆ ಎಂದರು.

ಹಿರಿಯ ಚಿಂತಕ ಕಾಳೇಗೌಡ ನಾಗವಾರ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್‌, ಕಸಾಪ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಾದೇಶಿಕ ಪಕ್ಷಗಳು ತಮಗೆ ಅನುಕೂಲವಾದಾಗ ಅಥವಾ ಅನುಕೂಲವಾಗಬೇಕು ಎನ್ನುವಾಗ ಸ್ಥಳೀಯ ಸಮಸ್ಯೆ, ಆರ್ಥಿಕತೆ, ಸಂಸ್ಕೃತಿ ಇದನ್ನೆಲ್ಲಾ ಬೆಳೆಸಲು ಪ್ರಾದೇಶಿಕ ಪಕ್ಷಗಳೇ ಮುಖ್ಯ, ರಾಷ್ಟ್ರೀಯ ಪಕ್ಷಗಳ ಕೈಯಿಂದ ಇದೆಲ್ಲಾ ಸಾಧ್ಯವಿಲ್ಲ ಎಂದು ಭಾಷಣ ಮಾಡುತ್ತವೆ. ಈ ಮೂಲಕ ತಮ್ಮ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುತ್ತವೆ. ಈಗ ಇಂತಹ ಪರಿಸ್ಥಿತಿ ಬಂದಾಗ ಸ್ಥಳೀಯ ಆದ್ಯತೆಯನ್ನು ಮರೆತೇಬಿಡುತ್ತಾರೆ. ಮಾತೃಭಾಷೆ ಕಲಿಕೆ ವಿಷಯದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಅದನ್ನು ತಿದ್ದಿಕೊಳ್ಳುವ ಅವಶ್ಯಕತೆ ಇದೆ. ಸರ್ಕಾರ ತನ್ನ ತಪ್ಪು ಸರಿಪಡಿಸಿಕೊಳ್ಳದಿದ್ದರೆ ಹೋರಾಟಗಾರರು ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ.

- ಎಸ್‌.ಎಲ್‌.ಭೈರಪ್ಪ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ

Follow Us:
Download App:
  • android
  • ios