ಕೋಲಾರ(ಜ.07): ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೃಷಿ ಇಲಾಖೆ ವತಿಯಿಂದ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಮತ್ತು ಎನ್‌.ವಡ್ಡಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹಾಗೂ ಅಬಕಾರಿ ಸಚಿವ ಎಚ್‌.ನಾಗೇಶ್‌ ಹೀಗೆ ಇಡೀ ದಿನ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ತಾವೇನು ಕಮ್ಮಿ ಎನ್ನುವಂತೆ ಸಂಸದ ಎಸ್‌.ಮುನಿಸ್ವಾಮಿ ಸಹ ಕೃಷಿ ಕೆಲಸ ಮಾಡಿದರು.

"

ತಲೆಗೆ ಹಸಿರು ಶಾಲು ಸುತ್ತಿ ರೈತರೊಂದಿಗೆ ಬೆರೆತ ಸಚಿವದ್ವಯರು ನೇಗಿಲು ಹಿಡಿದು ಉಳುಮೆ ಮಾಡಿದರು. ರಾಗಿ ರಾಶಿಗೆ ಪೂಜೆ ಮಾಡಿ, ರಾಗಿಯನ್ನು ಗುಡಾಣಕ್ಕೆ ತುಂಬಿಸಿದರು. ಜತೆಗೆ ಹುಲ್ಲು ಕತ್ತರಿಸಿ ಹಸುಗಳಿಗೆ ಹಾಕಿದರು, ಹಾಲು ಕರೆದರು, ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪು ಹಾಕಿದರು, ಆಲೂಗಡ್ಡೆ ಹಾಗೂ ಟೊಮೆಟೊ ಸಸಿ ನಾಟಿ ಮಾಡಿದರು. ಅಲ್ಲದೇ ಜಮೀನಿಗೆ ಗೊಬ್ಬರ ಹಾಕಿ, ಬೆಳೆಗಳಿಗೆ ಜೀವಾಮೃತ ಸಿಂಪಡಿಸಿದರು. ಅಜೋಲ ತೊಟ್ಟಿವೀಕ್ಷಿಸಿ, ಕುರಿಗಳಿಗೆ ಮೇವು ಹಾಕಿದರು.

ಬೇವಹಳ್ಳಿ ಗ್ರಾಮದ ಪ್ರಗತಿಪರ ರೈತ ಬಾಬು, ಬೈಯ್ಯಪ್ಪ ಅವರ ಕೃಷಿ ತಾಕುಗಳಿಗೆ ಭೇಟಿ ನೀಡಿದ ಸಚಿವರು, ಸೌತೆಬೀಜ ಬಿತ್ತನೆ ಮಾಡಿದರು. ಪ್ರಗತಿ ಪರ ರೈತ ದಂಪತಿ ಅಶ್ವತ್ಥಮ್ಮ ಹಾಗೂ ಮೋಹನ್‌ ಅವರ ಕೃಷಿ ಚಟುವಟಿಕೆಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಶ್ವತ್ಥಮ್ಮ ಅವರ ಮನೆಯಲ್ಲಿ ಬೇಯಿಸಿದ ಅವರೆಕಾಯಿ, ಗೆಣಸು, ಕಡಲೆಕಾಯಿ ಸವಿದರು. ಇದೇ ವೇಳೆ ರೈತರಿಗಾಗಿ ಸಸಿ ನಾಟಿ ಮಾಡುವ, ಟೊಮೆಟೊ ಕೊಯ್ಲು ಮಾಡುವ ಸ್ಪರ್ಧೆ ಕೂಡ ನಡೆಸಲಾಯಿತು. ಗೆದ್ದವರಿಗೆ ನಗದು ಬಹುಮಾತ ವಿತರಿಸಲಾಯಿತು.

ಇನ್ನೆರಡು ವರ್ಷದಲ್ಲಿ ಅನುಭವ ಮಂಟಪ ಪೂರ್ಣ: ಸಿಎಂ ಬಿಎಸ್‌ವೈ ಘೋಷಣೆ

ರೈತರೊಂದಿಗೆ ಆನ್‌ಲೈನ್‌ ಸಂವಾದ:

ಸಚಿವರು ಹಾಗೂ ಸಂಸದರು ಎನ್‌.ವಡ್ಡಹಳ್ಳಿಗೆ ಆಗಮಿಸುತ್ತಿದ್ದಂತೆ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಿದ್ದ ಎನ್‌.ವಡ್ಡಹಳ್ಳಿ ಎಪಿಎಂಸಿ ತನಕ ಎತ್ತಿನಗಾಡಿಯಲ್ಲಿ ಕರೆ ತರಲಾಯಿತು. ಪ್ರಗತಿಪರ ರೈತರ ಕೃಷಿ ಪ್ರಯೋಗಗಳು, ಕೃಷಿ ಪದ್ಧತಿ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಕೃಷಿ ಪರಿಕರಗಳ ವಿತರಿಸಲಾಯಿತು. ಪ್ರಗತಿ ಪರ ರೈತರನ್ನು ಸನ್ಮಾನಿಸಿದ ಸಚಿವರು, ಜಿಲ್ಲೆಯ ವಿವಿಧ ಭಾಗಗಳ ರೈತರೊಂದಿಗೆ ಆನ್‌ಲೈನ್‌ನಲ್ಲಿ ಸಂವಾದ ನಡೆಸಿದರು. ‘ರೈತರೊಂದಿಗೆ ಒಂದು ದಿನ’ ಮೊದಲ ಕಾರ್ಯಕ್ರಮ ಮಂಡ್ಯದಲ್ಲಿ ನಡೆದಿತ್ತು.

ಗಾಬರಿಗೊಂಡ ಎತ್ತುಗಳು

ಬೇವಹಳ್ಳಿ ಗ್ರಾಮದ ಅಶ್ವತ್ಥಮ್ಮ ಅವರ ಜಮೀನಿನಲ್ಲಿ ಸಚಿವರಾದ ಬಿ.ಸಿ.ಪಾಟೀಲ್‌ ಹಾಗೂ ನಾಗೇಶ್‌ ನೇಗಿಲು ಹಿಡಿದು ಹೊಲ ಉಳುಮೆ ಮಾಡುವಾಗ ಗಾಬರಿಗೊಂಡ ಎತ್ತುಗಳು ಎತ್ತಂದರತ್ತ ಓಡಿದವು. ಎತ್ತುಗಳ ವರ್ತನೆಯಿಂದ ಪಾಟೀಲ್‌, ನಾಗೇಶ್‌ ಕೊಂಚ ವಿಚಲಿತರಾದರು. ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಎತ್ತುಗಳ ಮೈ ನೀವಿ ಸಮಾಧಾನಪಡಿಸಿದರು.