ನವದೆಹಲಿ(ಡಿ.12): ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್‌, ಚಿಂತಕ ಎಂ.ಎಂ.ಕಲ್ಬುರ್ಗಿ, ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಅವರ ಪ್ರಕರಣಗಳಲ್ಲಿ ಸಾಮ್ಯತೆ ಇರುವುದಾದರೆ ಏಕೆ ಈ ನಾಲ್ಕೂ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಕೇಳಿದೆ. ಈ ಬಗ್ಗೆ ಜನವರಿ ಮೊದಲ ವಾರ ಪ್ರತಿಕ್ರಿಯೆ ನೀಡುವಂತೆಯೂ ಸಿಬಿಐಗೆ ಸೂಚಿಸಿದೆ.

ಅದರೊಂದಿಗೆ, ಈಗಾಗಲೇ ಕರ್ನಾಟಕ ಪೊಲೀಸ್‌ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಹುತೇಕ ತನಿಖೆಯನ್ನು ಪೂರ್ಣಗೊಳಿಸಿರುವ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಹಾಗೂ ಇನ್ನೂ ಹಂತಕರ ಸುಳಿವು ಪತ್ತೆಯಾಗದ ಎಂ.ಎಂ.ಕಲ್ಬುರ್ಗಿ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವ ಸಾಧ್ಯತೆ ಕಾಣಿಸಿಕೊಂಡಿದೆ.

ತಮ್ಮ ಪತಿಯ ಹತ್ಯೆಗೂ ಮಹಾರಾಷ್ಟ್ರದ ದಾಭೋಲ್ಕರ್‌ ಹಾಗೂ ಪಾನ್ಸರೆ ಹತ್ಯೆಗೂ ಸಂಬಂಧವಿದೆ ಎಂದು ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಸುಮಾರು ಒಂದು ವರ್ಷದ ಹಿಂದೆ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಈ ಬಗ್ಗೆ ಕರ್ನಾಟಕ ಪೊಲೀಸರು ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ಸುಪ್ರೀಂಕೋರ್ಟ್‌ ವಿವರಣೆ ಕೇಳಿತ್ತು. ಉಮಾದೇವಿ ಅರ್ಜಿ ವಿಚಾರಣೆಯ ವೇಳೆ ಮಂಗಳವಾರ ಕರ್ನಾಟಕ ಪೊಲೀಸರು, ಗೌರಿ ಹಾಗೂ ಕಲ್ಬುರ್ಗಿ ಹತ್ಯೆ ನಡುವೆ ಸಂಬಂಧ ಇರುವ ಸಾಧ್ಯತೆಯಿದೆ. ಇನ್ನು 3 ತಿಂಗಳಲ್ಲಿ ಕಲ್ಬುರ್ಗಿ ಪ್ರಕರಣದಲ್ಲಿ ಆರೋಪ ಪಟ್ಟಿಸಲ್ಲಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಮಹಾರಾಷ್ಟ್ರ ಸರ್ಕಾರ ಪ್ರತಿಕ್ರಿಯೆ ನೀಡಿ, ಬಾಂಬೆ ಹೈಕೋರ್ಟ್‌ ಆದೇಶದಂತೆ ದಾಭೋಲ್ಕರ್‌ ಹತ್ಯೆಯನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪಾನ್ಸರೆ ಪ್ರಕರಣ ಕೊಲ್ಲಾಪುರದ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ತಿಳಿಸಿತು. ಆಗ ಸಿಬಿಐ ವಕೀಲರನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್‌, ಗೌರಿ ಹಾಗೂ ಕಲ್ಬುರ್ಗಿ ಹತ್ಯೆ ಪ್ರಕರಣಗಳಿಗೆ ಪರಸ್ಪರ ಸಂಬಂಧ ಇರುವಂತಿದೆ. ದಾಭೋಲ್ಕರ್‌ ಪ್ರಕರಣವನ್ನು ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದೆ. ಈ ಎಲ್ಲ ಪ್ರಕರಣಗಳ ನಡುವೆಯೂ ಸಂಬಂಧವಿರುವ ಅನುಮಾನವಿದ್ದರೆ ಏಕೆ ಸಿಬಿಐಯೇ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಬಾರದು? ಈ ಬಗ್ಗೆ ಜನವರಿ ಮೊದಲ ವಾರದಲ್ಲಿ ಪ್ರತಿಕ್ರಿಯೆ ನೀಡಿ ಎಂದು ಸೂಚಿಸಿತು.

2013ರಲ್ಲಿ ದಾಭೋಲ್ಕರ್‌, 2015ರಲ್ಲಿ ಪಾನ್ಸರೆ, ಅದೇ ವರ್ಷ ಕಲ್ಬುರ್ಗಿ ಹಾಗೂ 2017ರಲ್ಲಿ ಗೌರಿ ಲಂಕೇಶ್‌ ಹತ್ಯೆಗೀಡಾಗಿದ್ದಾರೆ.