ಜಾರ್ಖಂಡ್[ಆ. 01]: ಜಾರ್ಖಂಡ್ ನ ಜಮ್ಶೇಡ್ ಪುರದಲ್ಲಿ ಶಾಕಿಂಗ್ ಘಟನೆಯೊಂದು ವರದಿಯಾಗಿದೆ. ರೈಲ್ವೇ ಸ್ಟೇಷನ್ ನಿಂದ 3 ವರ್ಷದ ಪುಟ್ಟ ಮಗುವನ್ನು ದುಷ್ಕರ್ಮಿಗಳಿಬ್ಬರು ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಅತ್ಯಾಚಾರಗೈದು, ರುಂಡ ತುಂಡರಿಸಿ ಎಸೆದು ಕ್ರೌರ್ಯ ಮೆರೆದಿದ್ದಾರೆ. 

ಮಂಗಳವಾರ ರಾತ್ರಿ ಟೆಲ್ಕೋ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರುಂಡವಿಲ್ಲದ ದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರಕರಣ ಸಂಬಂಧ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಓರ್ವ ಆರೋಪಿ 2015ರಲ್ಲಿ ಮಕ್ಕಳ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಡೆದಿದ್ದೇನೆ:

ಕಳೆದ ವಾರ ರೈಲ್ವೇ ಸ್ಟೇಷನ್ ನಲ್ಲಿ ರಾತ್ರಿ ತನ್ನ ತಾಯಿಯೊಂದಿಗೆ ಮಲಗಿದ್ದ 3 ವರ್ಷದ ಮಗು ಬೆಳಗ್ಗೆದ್ದಾಗ ನಾಪತ್ತೆಯಾಗಿತ್ತು. ಪೊಲೀಸರಿಗೆ ದೂರು ನೀಡಿ ಸಿಸಿಟಿವಿ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಮಲಗಿದ್ದ ಮಗುವನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಮಗುವಿನ ತಾಯಿಯ ವಿಚಾರಣೆ ನಡೆಸಿದಾಗ ತನಗೆ ತನ್ನ ಪ್ರಿಯಕರನ ಮೇಲೆ ಅನುಮಾನ ಇರುವುದಾಗಿ ತಿಳಿಸಿದ್ದಾಳೆ. ಆಕೆ ತನ್ನ ಪ್ರಿಯಕರನಿಗಾಗಿ ತನ್ನ ಗಂಡನನ್ನು ಬಿಟ್ಟು ಬಂಗಾಳಕ್ಕೆ ಹೋಗಿದ್ದಳು. ಸದ್ಯ ಬಂಧಿಸಿರುವ ಆರೋಪಿಗಳಲ್ಲಿ ಆಕೆಯ ಪ್ರಿಯಕರನೂ ಒಬ್ಬ,

ಮಂಗಳವಾರದಂದು ರಾತ್ರಿ ರೈಲ್ವೇ ಸ್ಟೇಷನ್ ನಿಂದ ಸುಮಾರು 4 ಕಿ. ಮೀ ದೂರದಲ್ಲಿರುವ ಪೊದೆಯಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿದ್ದ ಮಗುವಿನ ರುಂಡವಿಲ್ಲದ ದೇಹ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ತಾವೇ ಈ ಕೃತ್ಯ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಹುಡುಕಾಡುವಲ್ಲಿ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಬಹಳಷ್ಟು ಸಹಾಯ ಮಾಡಿದೆ.