ಹೈದರಾಬಾದ್(ಜ.17): ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ತಣ್ಣನೇ ಗಾಳಿ ಸಮೇತ ಸಹೋದರತ್ವದ ಸಂದೇಶವೊಂದು ಹರಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ತೆಲಂಗಾಣ ಸಚಿವ ಕೆ.ಟಿ. ರಾಮಾರಾವ್ ಅವರಿಗೆ ತಮ್ಮ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದೇನು?, ಓಮರ್ ಅಬ್ದುಲ್ಲಾ ಏಕೆ ಕೆಟಿಆರ್ ಅವರಿಗೆ ಮನೆ ನೀಡ್ತಾರೆ?.ಅಷ್ಟಕ್ಕೂ ಕೆಟಿಆರ್ ಏಕೆ ಓಮರ್ ಅಬ್ದುಲ್ಲಾ ಅವರಿಂದ ಮನೆ ಬಯಸುತ್ತಾರೆ?. ಎಂಬೆಲ್ಲಾ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯೇ?.

ಅಸಲಿಗೆ ಓಮರ್ ಅಬ್ದುಲ್ಲಾ ಹಿಮದಿಂದ ಆವೃತ್ತವಾದ ತಮ್ಮ ಮನೆಯ ಸುಂದರ ಫೋಟೋವೊಂದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಕಣಿವೆಯ ಸೌಂದರ್ಯ ಕಂಡು ಮಾರು ಹೋಗಿದ್ದ ಕೆಟಿಆರ್, ಪಕ್ಕದಲ್ಲಾದರೂ ಸರಿ ನನಗೊಂದು ಮನೆ ನೋಡಿ ಅಂತಾ ತಮಾಷೆಯಾಗಿ ಟ್ವೀಟ್ ಮಾಡಿದ್ದರು.

ಕೆಟಿಆರ್ ಟ್ವೀಟ್‌ಗೆ ರಿಟ್ವೀಟ್ ಮಾಡಿರುವ ಓಮರ್ ಅಬ್ದುಲ್ಲಾ, ನನ್ನ ಮನೆ ನಿಮ್ಮ ಮನೆಯಲ್ಲವೇ ಸಹೋದರ. ಖಂಡಿತ ಕಣಿವೆಗೆ ಬನ್ನಿ ಈ ಸೌಂದರ್ಯವನ್ನು ಆಸ್ವಾದಿಸಿ ಎಂದು ಆಹ್ವಾನ ನೀಡಿದ್ದಾರೆ.