ನವದೆಹಲಿ(ಅ.22): 2019ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಅಭಿಜಿತ್ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಬಡತನ ನಿವಾರಣೆಗೆ ಅವರು ಸೂಚಿಸಿರುವ ಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಎನ್ನಲಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಅಭಿಜಿತ್ ಬ್ಯಾನರ್ಜಿ ಖಂಡಿಸಿದ್ದರು. ಅಲ್ಲದೇ ದೇಶದ ಆರ್ಥಿಕ ವ್ಯವಸ್ಥೆ ಸದ್ಯಕ್ಕೆ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ ಎಂದು ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಭಿಜಿತ್ ಬ್ಯಾನರ್ಜಿ ಹೇಳಿಕೆಯಿಂದ ಕೆರಳಿದ್ದ ಬಿಜೆಪಿ ನಾಯಕರು, ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಭಿಜಿತ್ ಎಡಪಂಥೀಯರಾಗಿದ್ದು, ಮೋದಿ ಹೆಸರಿಗೆ ಮಸಿ ಬಳಿಯಲು ಸುಖಾ ಸುಮ್ಮನೆ ಅರ್ಥ ವ್ಯವಸ್ಥೆ ಕುರಿತು ಟೀಕೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೊಯೆಲ್ ಟೀಕಿಸಿದ್ದರು.

ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆಯೂ ಪ್ರಧಾನಿ ಮೋದಿ ಹಾಗೂ ಅಭಿಜಿತ್ ಬ್ಯಾನರ್ಜಿ ಭೇಟಿ ಮಾಡಿದ್ದು, ಇಬ್ಬರ ನಡುವಿನ ಮಾತುಕತೆ ಕುರಿತು ತೀವ್ರ ಕುತೂಹಲ ಮೂಡಿದೆ.