ಚಿಕ್ಕಬಳ್ಳಾಪುರ ಸ್ಫೋಟ ತನಿಖೆಗೆ ಎನ್‌ಜಿಟಿ ಸಮಿತಿ
ಪತ್ರಿಕಾ ವರದಿಗಳನ್ನು ಆಧರಿಸಿ ತನಿಖೆ ಕೈಗೆತ್ತಿಕೊಂಡ ಹಸಿರು ನ್ಯಾಯಾಧಿಕರಣ| ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಗಣಿ ಇಲಾಖೆಯ ನಿರ್ದೇಶಕರಿಗೆ ನೋಟಿಸ್ ಜಾರಿ|
ನವದೆಹಲಿ(ಮಾ.01): ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ಕ್ವಾರಿಯೊಂದರಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಿಸಿ ಆರು ಮಂದಿ ಮೃತಪಟ್ಟ ಘಟನೆಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸ್ವಯಂಪ್ರೇರಿತವಾಗಿ ತನಿಖೆ ನಡೆಸಲು ನಿರ್ಧರಿಸಿದೆ.
ಇದಕ್ಕೆ ಸಂಬಂಧಪಟ್ಟಂತೆ ಎನ್‌ಜಿಟಿ ಆರು ಮಂದಿ ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಗೆ ವರದಿ ನೀಡುವಂತೆ ನಿರ್ದೇಶಿಸಿದೆ. ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ ಎನ್‌ಜಿಟಿ ಮುಖ್ಯಸ್ಥ ನ್ಯಾ. ಎ.ಕೆ.ಗೋಯಲ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ತನಿಖೆಗೆ ಕೈಗೆತ್ತಿಕೊಂಡಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಎಸ್‌ಪಿಸಿಬಿ), ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ಗಣಿ ಇಲಾಖೆಯ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಗುಡಿಬಂಡೆ ಕ್ರಷರ್ ಜಿಲೆಟಿನ್ ಬ್ಲಾಸ್ಟ್: ಸ್ಥಳಕ್ಕೆ ಸುಧಾಕರ್ ಭೇಟಿ
ಇದೇ ವೇಳೆ, ಸಿಪಿಸಿಬಿ, ಎಸ್‌ಪಿಸಿಬಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಗಣಿ ಮಹಾ ನಿರ್ದೇಶನಾಲಯದ ಪ್ರತಿನಿಧಿ, ರಾಜ್ಯ ಗಣಿ ಇಲಾಖೆಯ ನಿರ್ದೇಶಕ ಹಾಗೂ ಸ್ಫೋಟಕಗಳ ಮುಖ್ಯ ನಿಯಂತ್ರಕರನ್ನು ಒಳಗೊಂಡ ಆರು ಮಂದಿ ತಜ್ಞರ ಸಮಿತಿಯನ್ನು ಎನ್‌ಜಿಟಿ ರಚಿಸಿದೆ. ಈ ಸಮಿತಿಯು ಮುಂದಿನ ವಾರ ಸ್ಥಳಕ್ಕೆ ಭೇಟಿ ನೀಡಿ, ಘಟನೆಗೆ ಸಂಬಂಧಪಟ್ಟ ಸಂಗತಿಗಳ ತನಿಖೆ ನಡೆಸಿ ತನಗೆ ವರದಿ ನೀಡಬೇಕೆಂದು ಸೂಚಿಸಿದೆ.
ಸಮಿತಿಯು ಸ್ಥಳಕ್ಕೆ ಭೇಟಿ ನೀಡುವುದನ್ನು ಹೊರತುಪಡಿಸಿ ಇನ್ನೆಲ್ಲಾ ತನಿಖೆ ಅಥವಾ ವಿಚಾರಣೆಯನ್ನು ಆನ್‌ಲೈನ್‌ನಲ್ಲೇ ನಡೆಸಬಹುದು. ಅಗತ್ಯಬಿದ್ದರೆ ಯಾವುದೇ ತಜ್ಞರು ಅಥವಾ ಸಂಸ್ಥೆಯ ನೆರವು ಪಡೆಯಬಹುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಏನು ಮಾಡಬೇಕು ಎಂಬ ಬಗ್ಗೆಯೂ ಶಿಫಾರಸುಗಳನ್ನು ಮಾಡಬಹುದು ಎಂದು ಎನ್‌ಜಿಟಿ ಹೇಳಿದೆ. ಫೆ.22ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಎಂಬ ಊರಿನ ಕಲ್ಲು ಗಣಿಯಲ್ಲಿ ಸ್ಫೋಟ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದರು.