ನವದೆಹಲಿ (ಫೆ. 20): ಯೋಗದ ಕಾರಣದಿಂದಲೇ ಜವಾಹರಲಾಲ್‌ ನೆಹರು ಮತ್ತು ನರೇಂದ್ರ ಮೋದಿ ಈ ದೇಶದ ಪ್ರಧಾನಿಗಳಾದರಂತೆ. ಹೀಗೆ ಹೇಳಿದ್ದು ಯೋಗಗುರು ಬಾಬಾ ರಾಮದೇವ್‌!

ಛತ್ತೀಸ್‌ಗಢದ ರಾಯ್‌ಪುರದಲ್ಲಿ ತಮ್ಮ ಉದ್ಯಮವಾದ ಪಂತಂಜಲಿಯ ಸಾಹಸ ಪರಿಕರಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಯೋಗದ ಬಗ್ಗೆ ಉತ್ಸಾಹಿಯಾಗಿದ್ದಾರೆ. ಒತ್ತಡ ರಹಿತ ಬದುಕಿಗೆ ಮತ್ತು ಪ್ರಾಚೀನ ಭಾರತದ ಬದುಕಿನ ಈ ಕಲೆಯನ್ನು ರಾಜಕಾರಣಿಗಳು ಉಳಿಸಿಕೊಂಡು ಹೋಗಬೇಕು. ಯಾರು ಯೋಗವನ್ನು ಮಾಡುವರೋ ಅವರಿಗೆ ರಾಜಯೋಗ ಒಲಿದು ಬರುತ್ತದೆ.

ಜವಾಹರಲಾಲ್‌ ನೆಹರು ಮತ್ತು ಇಂದಿರಾಗಾಂಧಿ ಉತ್ತಮವಾಗಿ ಯೋಗಾಭ್ಯಾಸ ಮಾಡಿದ್ದರಿಂಲೇ ಅವರಿಗೆ ರಾಜಯೋಗ ಲಭಿಸಿತ್ತು. ಅದರಂತೆಯೇ ಟೀ-ಮಾರುತ್ತಿದ್ದವರ ಮಗ, ನರೇಂದ್ರ ಮೋದಿ ಕೂಡ ಯೋಗಾಭ್ಯಾಸ ಮಾಡಿ ರಾಜಯೋಗದಿಂದ ಪ್ರಧಾನಿಯಾಗಿದ್ದಾರೆ. ಯೋಗಿ ಆದಿತ್ಯನಾಥ ಯೋಗದಿಂದಲೇ ದೇಶದ ಅತಿ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ರಾಹುಲ್‌ ಗಾಂಧಿ ಕೂಡ ಯೋಗಾಭ್ಯಾಸ ನಡೆಸಿದ್ದರಿಂದಲೇ ಉತ್ತಮ ಬೆಳವಣಿಗೆ ಕಂಡುಕೊಳ್ಳುತ್ತಿದ್ದಾರೆ. ಎಲ್ಲ ರಾಜಕಾರಣಿಗಳು ಯೋಗದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡಿದರು. ಯೋಗದ ಅಭ್ಯಾಸದಿಂದಲೇ ರಾಹುಲ್‌ ಗಾಂಧಿ ದೇಶದ ಅತಿದೊಡ್ಡ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಯೋಗಕ್ಕೆ ಧನ್ಯವಾದ ತಿಳಿಸಿದ್ದಾರೆ ಎಂದರು.