Asianet Suvarna News Asianet Suvarna News

2 ದಿನ ಮೆಟ್ರೋ ಸಂಚಾರ ಸ್ಥಗಿತ

2 ದಿನಗಳ ಕಾಲ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ.  ಟ್ರಿನಿಟಿ ನಿಲ್ದಾಣದ 155 ಮೆಟ್ರೋ ಪಿಲ್ಲರ್‌ ಬೀಮ್‌(ವಯಾಡಕ್ಟ್)ನಲ್ಲಿ ಕಾಣಿಸಿಕೊಂಡಿದ್ದ ಬಿರುಕನ್ನು ದುರಸ್ತಿಗೊಳಿಸಲು ಸಂಚಾರ ರದ್ದು ಮಾಡಲಾಗುತ್ತಿದೆ. 

Namma Metro Not to Run 2 Days Between MG Road Indiranagar
Author
Bengaluru, First Published Dec 22, 2018, 10:32 AM IST

ಬೆಂಗಳೂರು :  ನಗರದ ಟ್ರಿನಿಟಿ ನಿಲ್ದಾಣದ 155 ಮೆಟ್ರೋ ಪಿಲ್ಲರ್‌ ಬೀಮ್‌(ವಯಾಡಕ್ಟ್)ನಲ್ಲಿ ಕಾಣಿಸಿಕೊಂಡಿದ್ದ ಬಿರುಕನ್ನು ಡಿ.28ರಂದು ದುರಸ್ತಿಗೊಳಿಸಲು ನಿರ್ಧರಿಸಿದ್ದು, ಡಿ.29 ಮತ್ತು 30ರಂದು ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ) ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಡಿ.28ರಂದು ರಾತ್ರಿ 8 ಬಳಿಕ ದುರಸ್ತಿ ಕಾಮಗಾರಿ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಂದಿನಿಂದ ಡಿ.30ರವರೆಗೆ ಎಂ.ಜಿ.ರಸ್ತೆಯಿಂದ ಇಂದಿರಾನಗರದ ವರೆಗಿನ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುವುದು. ಉಳಿದಂತೆ ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆಯಿಂದ ಎಂ.ಜಿ.ರಸ್ತೆ ಮತ್ತು ಇಂದಿರಾನಗರದಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲು ಸಂಚಾರ ನಡೆಯಲಿದೆ. ಮೆಟ್ರೋ ರೈಲು 6ರಿಂದ 15 ನಿಮಿಷಗಳಿಗೆ ಒಂದರಂತೆ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಡಿ.28ರಂದು ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಕಡೆಗೆ ರಾತ್ರಿ 7.30ಕ್ಕೆ ಕೊನೆಯ ರೈಲು ಹೊರಡಲಿದೆ. ಅಂತೆಯೇ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಕಡೆಗೆ 7.45ಕ್ಕೆ ಕೊನೆಯ ಮೆಟ್ರೋ ರೈಲು ಸಂಚರಿಸಲಿದೆ. ಈ ಮೆಟ್ರೋ ರೈಲುಗಳ ಸಂಚಾರದ ಬಳಿಕ ಉಳಿದ ರೈಲುಗಳು ಮೈಸೂರು ರಸ್ತೆಯಿಂದ ಎಂ.ಜಿ.ರಸ್ತೆ ಮತ್ತು ಇಂದಿರಾನಗರದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿವೆ. ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ಮೆಟ್ರೊ ಪ್ರಯಾಣಿಕರು ಟಿಕೆಟ್‌ಗಳನ್ನು ಸಂಜೆ 6.45 ಒಳಗೆ ಖರೀದಿಸಿ ಈ ಮಾರ್ಗಗಳಲ್ಲಿ ಸಂಚರಿಸಬಹುದು ಎಂದು ನಿಗಮ ತಿಳಿಸಿದೆ.

ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಕಬ್ಬನ್‌ಪಾರ್ಕ್ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಡಿ.28ರಂದು ರಾತ್ರಿ 8ರಿಂದ 11ರವರೆಗೆ ಮತ್ತು ಡಿ.29 ಹಾಗೂ 30ರಂದು ಇಡೀ ದಿನ ಉಚಿತವಾಗಿ ಬಸ್‌ ಸೇವೆ ಒದಗಿಸಲು ನಿಗಮ ತೀರ್ಮಾನಿಸಿದೆ. ಡಿ.31ರಂದು ಬೆಳಗ್ಗೆ 5ಕ್ಕೆ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೊ ರೈಲು ಸಂಚಾರ ಮುಂದುವರೆಯಲಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌವ್ಹಾಣ್‌ ತಿಳಿಸಿದ್ದಾರೆ.

Follow Us:
Download App:
  • android
  • ios