ಬೆಂಗಳೂರು(ಡಿ.12): ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಇನ್ನೇನು ಮೋದಿ ಯುಗ ಮುಗೀತು ಅಂತಾ ಕೆಲವರು ಈಗಾಗಲೇ ಶರಾ ಬರೆದು ಬಿಟ್ಟಿದ್ದಾರೆ. ಇನ್ನೂ ಕೆಲವರು ರಾಹುಲ್ ಗಾಂಧಿ ಅವರನ್ನು ದೇಶದ ಹೊಸ ಬಾಹುಬಲಿ ಎಂಬಂತೆ ಬಿಂಬಿಸುತ್ತಿದ್ದಾರೆ.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಮತ್ತು ಕಾಂಗ್ರೆಸ್ ಗೆಲುವನ್ನು ರಾಜಕೀಯ ವಿಶ್ಲೇಷಕರು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ವಿಶ್ಲೇಷಿಸುತ್ತಿದ್ದಾರೆ.

ಈ ಮಧ್ಯೆ ಸಂಸದ ರಾಜೀವ್ ಚಂದ್ರಶೇಖರ್ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡ್ ರಾಜ್ಯಗಳಲ್ಲಿನ ಕಾಂಗ್ರೆಸ್ ಗೆಲುವಿಗೆ ರಾಜೀವ್ ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ಕಾಂಗ್ರೆಸ್ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಇದಕ್ಕೆ ತಮ್ಮದೇ ಆದ ವಿಶಿಷ್ಟ ಕಾರಣವನ್ನೂ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮೂರೂ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಳ್ಳೆಯದೇ ಆಯಿತು, ಇನ್ನು ಮುಂದಾದರೂ ಕರ್ನಾಟಕದ ಹಣವನ್ನು ಆ ರಾಜ್ಯಗಳಿಗೆ ಕೊಡುವ ದುಷ್ಟ ಪದ್ದತಿಗೆ ಕಡಿವಾಣ ಬೀಳುತ್ತದೆ ಎಂದು ಹೇಳಿದ್ದಾರೆ.

ಉತ್ತರದಲ್ಲಿ ದುರ್ಬಲವಾಗಿದ್ದ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷದಿಂದ ಹಣ ಹೋಗುತ್ತಿತ್ತು ಎಂಬರ್ಥದಲ್ಲಿ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ. ಈ ಗೆಲುವಿನ ಮೂಲಕವಾದರೂ ಮೂರೂ ರಾಜ್ಯಗಳ ಕಾಂಗ್ರೆಸ್ ಪಕ್ಷವನ್ನು ಸಾಕುವ ಕಷ್ಟದಿಂದ ಕಾಂಗ್ರೆಸ್ ಕರ್ನಾಟಕವನ್ನು ಪಾರು ಮಾಡಲಿ ಎಂದು ರಾಜೀವ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.