ಧಾರವಾಡ(ಜು. 19) ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲ್ಬುರ್ಗಿ ಹತ್ಯೆಯ ಪ್ರಮುಖ ಆರೋಪಿ ಗುರುತು ಪತ್ತೆಯಾಗಿದೆ. ಕಲ್ಬುರ್ಗಿ ಪತ್ನಿ ಉಮಾದೇವಿ ಆರೋಪಿ ಗಣೇಶ ಮಿಸ್ಕಿನ್ ಗುರುತು ಹಿಡಿದಿದ್ದಾರೆ.

ಕಲ್ಬುರ್ಗಿ ಹತ್ಯೆಗೆ ಗಣೇಶ ಮಿಸ್ಕಿನ್ ಎಂಬಾತನನ್ನು ಬೈಕ್ ಮೇಲೆ ಕರೆದು ತಂದಿದ್ದ ಬೆಳಗಾವಿಯ ಪ್ರವೀಣ ಚತುರನನ್ನು ಎಸ್‌ಐಟಿ ಅಧಿಕಾರಿಗಳು ಕಳೆದ ಮೇ 31 ರಂದು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದರು. ಇದರ ಬೆನ್ನಲ್ಲಿಯೇ ಮುಂಬೈನ ಜೈಲಿನಲ್ಲಿದ್ದ ಗಣೇಶ ಮಿಸ್ಕಿನ್‌ನ್ನು ಬುಧವಾರ ಧಾರವಾಡ ಕೇಂದ್ರ ಕಾರಾಗೃಹಕ್ಕೆ ತಂದು ಆರೋಪಿಗಳ ಪರೇಡ್ ನಡೆಸಲಾಗಿದೆ.

ಕಲ್ಬುರ್ಗಿ ಹಂತಕರ ಜಾಡು ಎಲ್ಲಿದೆ?

ಈ ಸಂದರ್ಭದಲ್ಲಿ ಕಲ್ಬುರ್ಗಿ ಅವರ ಪತ್ನಿ ಉಮಾದೇವಿ, ಗಣೇಶ ಮಿಸ್ಕಿನ್ ಎಂಬಾತನೇ ನನ್ನ ಪತಿಗೆ ಗುಂಡು ಹೊಡೆದಿರುವುದಾಗಿ ಹೇಳಿದ್ದು ಗುರುತು ಹಿಡಿದಿದ್ದಾರೆ.

ಮಿಸ್ಕನ್ ನೋಡಿದ ಕೂಡಲೇ ಉಮಾದೇವಿ ಕುಸಿದು ಬಿದ್ದಿದ್ದಾರೆ. 2015 ಆಗಸ್ಟ್ 30 ರಂದು ಬೆಳಗ್ಗೆ ಮಿಸ್ಕಿನ್ ನನ್ನು ಉಮಾದೇವಿ ನೋಡಿದ್ದಾರೆ. ಆತ ಬಾಗಿಲು ಬಡಿದಾಗ ಉಮಾದೇವಿ ಬಾಗಿಲು ತೆರೆದಿದ್ದಾರೆ. ಆಗ ಮಿಸ್ಕಿನ್ ಕಲ್ಬುರ್ಗಿ ಅವರನ್ನು ಕೇಳಿದ್ದಾನೆ. ನಂತರ ಅವರು ಬಾಗಿಲ ಬಳಿ ಬಂದಾಗ  ಗುಂಡು ಹೊಡೆದಿದ್ದಾನೆ ಎಂಬ ವಿವರಗಳು ಲಭ್ಯವಾಗಿವೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಯೂ ಆರೋಪಿಯ ಹೆಸರಿದೆ.