ಕಾರವಾರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಜೀವ ಬೆದರಿಕೆ ಒಡ್ಡಲಾಗಿದೆ.ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೀವ ಬೆದರಿಕೆ ಕರೆ ಬಂದಿರುವುದು ಸಚಿವರನ್ನು ಘಾಸಿಗೊಳಿಸಿದೆ.

ಇಂಟರ್ ನೆಟ್ ಕಾಲ್ ಮಾಡಿ ಬೆದರಿಕೆ ಹಾಕಲಾಗಿದ್ದು, ಮೊದಲು +4044 ನಂಬರ್ ನಿಂದ ಸಚಿವ ಅನಂತಕುಮಾರ ಹೆಗಡೆ ಅವರ ಮನೆಯ ಲ್ಯಾಂಡ್ ಲೈನ್’ಗೆ ಕರೆ ಮಾಡಲಾಗಿದೆ. ಬಳಿಕ ಬೆಳಗಿನ ಜಾವ 2 ಗಂಟೆಗೆ ಮತ್ತೆ ಕರೆ ಬಂದಿದೆ. ಈ ಕರೆಯನ್ನು 004044000 ನಂಬರ್ ನಿಂದ ಮಾಡಲಾಗಿದೆ.

2ನೇ ಬಾರಿ ಬಂದ ಕರೆಯನ್ನು ಸಚಿವ ಅನಂತಕುಮಾರ ಹೆಗಡೆ ಅವರ ಪತ್ನಿ ಶ್ರೀರೂಪಾ ಸ್ವೀಕರಿಸಿದ್ದು, ಈ ವೇಳೆ ಕಾಲ್ ಮಾಡಿದ ವ್ಯಕ್ತಿ ಆಪ್ ಕೌನ್ ಹೈ ಎಂದು ಹಿಂದಿಯಲ್ಲಿ ವಿಚಾರಿಸಿದ್ದಾನೆ. ಬಳಿಕ ಕಾಲ್ ಮಾಡಿದ ವ್ಯಕ್ತಿಗೆ ಸಚಿವರ ಹೆಂಡತಿ ನಿವ್ಯಾರೆಂದು ವಿಚಾರಿಸಿದ್ದಾರೆ. ಬಳಿಕ ಕರೆ ಮಾಡಿದ ವ್ಯಕ್ತಿ ಕೊನೆಗೆ ಕರೆ ಸ್ಥಗಿತಗೊಳಿಸಿ, ಮತ್ತೆ 2-25 ನಿಮಿಷಕ್ಕೆ ಮತ್ತೆ ಅದೇ ನಂಬರಿನಿಂದ ಕರೆ ಮಾಡಿದ್ದಾನೆ.

ಸಚಿವ ಅನಂತಕುಮಾರ ಹೆಗಡೆ ಕರೆ ಸ್ವೀಕರಿಸಿದಾಗ ನೀವು ಅನಂತಕುಮಾರ ಹೆಗಡೆಯವರಾ ಎಂದು ಕೇಳಿದ ವ್ಯಕ್ತಿ ನೀನು ಏನೆಂದು ತಿಳಿದುಕೊಂಡಿದ್ದೀಯಾ? ನೀನು ದೊಡ್ಡ ಲೀಡರಾ? ನಾವು ನಿನ್ನ ತಲೆಯನ್ನು ಕತ್ತರಿಸಿ ಹಾಕುತ್ತೇವೆ. ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.

 ಸಂಬಂಧ  ಉತ್ತರಕನ್ನಡ ಜಿಲ್ಲೆಯ ಶಿರಸಿ ಮಾರುಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.