Asianet Suvarna News Asianet Suvarna News

ಅಂಬೇಡ್ಕರ್‌ರಿಂದಲೇ ಮಾಯಾವತಿ ಸಿಎಂ ಆಗಲು ಸಾಧ್ಯವಾದದ್ದು!

ಡಿ.06 ಅಂಬೇಡ್ಕರ್ ಮಹಾ ಪರಿನಿರ್ವಾಣಧ ದಿನ. ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟಿದ್ದರಿಂದಲೇ ದಲಿತರು ಮುನ್ನಲೆಗೆ ಬರಲು ಸಾಧ್ಯವಾದದ್ದು. ಭಾರತೀಯರ ಕಣ್ಣಲ್ಲಿ ಮಹಾ ಮಾನವತಾವಾದಿಯಾಗಿ ಕಂಗೊಳಿಸುತ್ತಿರುವ ಸಂವಿಧಾನ ಶಿಲ್ಪಿ ಇವರು. 

Mayawati becomes Uttar Pradesh CM because of Ambedkar
Author
Bengaluru, First Published Dec 6, 2018, 4:43 PM IST

ಬೆಂಗಳೂರು (ಡಿ. 06): ಒಂದು ದಿನ ಏಳೆಂಟು ವರ್ಷದ ಪುಟ್ಟಹುಡುಗನೊಬ್ಬ ತನ್ನ ತಂದೆಯನ್ನು ನೋಡಲು ಎತ್ತಿನ ಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪದೂರ ಹೋಗಿರಬೇಕಷ್ಟೆ. ಹುಡುಗನ ಮಾತುಕತೆಗಳಿಂದ ಅವನು ದಲಿತ ಜನಾಂಗಕ್ಕೆ ಸೇರಿದವನೆಂದು ಗಾಡಿಯವನಿಗೆ ತಿಳಿಯಿತು.

ಕೋಪಗೊಂಡ ಆತ ಕೂಡಲೇ ಗಾಡಿ ನಿಲ್ಲಿಸಿ ನೊಗವನ್ನುಎತ್ತಿ ಅನಾಮತ್ತಾಗಿ ಪುಟ್ಟಹುಡುಗನನ್ನು ಕೆಳಕ್ಕೆ ಬೀಳಿಸಿ ಕೀಳ್ಜಾತಿಯವನೆಂದು ಬಾಯಿಗೆ ಬಂದಂತೆ ಬೈದ. ಇನ್ನೊಂದು ದಿನ ಅದೇ ಹುಡುಗ ಬಾಯಾರಿಕೆಯಿಂದ ಕೆರೆಯೊಂದರಲ್ಲಿ ನೀರು ಕುಡಿದ. ಇದನ್ನು ಯಾರೋ ನೋಡಿದರು. ಗುಂಪುಗೂಡಿ ಎಲ್ಲರೂ ಸೇರಿ ಕೀಳ್ಜಾತಿಯವನು ಕೆರೆ ಮುಟ್ಟಿದನೆಂದು ಆ ಹುಡುಗನಿಗೆ ಚೆನ್ನಾಗಿ ಥಳಿಸಿ ದೂರಕ್ಕೆ ದಬ್ಬಿದರು.

ಮತ್ತೊಂದು ದಿನ ಅದೇ ಹುಡುಗ ಓದಲೆಂದು ಸ್ಕೂಲಿಗೆ ಹೋಗುತ್ತಿದ್ದ. ದಾರಿ ಮಧ್ಯೆ ಜೋರಾಗಿ ಮಳೆ ಬಂತು. ಹುಡುಗ ಅಲ್ಲೇ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತ. ಮನೆಯ ಯಜಮಾನಿ ಹುಡುಗನನ್ನು ನೋಡಿ ಕೆಂಡವಾದಳು. ಕೀಳ್ಜಾತಿಯವನೆಂದು ನಿಂದಿಸುತ್ತಾ ಕೂಡಲೇ ಆ ಹುಡುಗನನ್ನು ಜಗಲಿಯಿಂದ ಕೆಳಕ್ಕೆ ದಬ್ಬಿದಳು.

ಅದೊಂದು ದಿನ ಅದೇ ಹುಡುಗ ಹೇರ್‌ಕಟ್ಟಿಂಗ್‌ ಮಾಡಿಸಿಕೊಳ್ಳಲು ಹೋಗುತ್ತಾನೆ. ಕೂದಲನ್ನು ಕತ್ತರಿಸುವ  ಕ್ಷೌರಿಕ ಕೂಡ ದಲಿತನೆಂಬ ಕಾರಣಕ್ಕೆ ಆ ಹುಡುಗನ ಕೂದಲನ್ನು ಮುಟ್ಟಲೊಲ್ಲ. ಪ್ರಾಪಂಚಿಕ ಜ್ಞಾನವೇ ಇರದ ಎಳೆಯ ನೆತ್ತಿಯ ಮೇಲೆ ಒನಕೆಯಿಂದ ಕುಟ್ಟಿದಂತಹ ಸಂಕಟದ ಅನುಭವಗಳಿವು.

ಅಸ್ಪೃಶ್ಯತೆ ಕರಿನೆರಳಲ್ಲೇ ಬೆಳೆದವರು

ಹೀಗೆ ಕೇವಲ ಹುಟ್ಟಿದ ಜಾತಿಯ ಕಾರಣಕ್ಕೆ ಇಂತಹ ಅದೆಷ್ಟೋ ಅವಮಾನಗಳನ್ನು ಅನುಭವಿಸುತ್ತ, ಅಸ್ಪೃಶ್ಯತೆಯ ಬೆಂಕಿಯಲ್ಲಿ ಬೇಯುತ್ತಲೇ ಬೆಳೆದ ಆ ಹುಡುಗ ತನಗೆ ಸರಿಯಾಗಿ ಅರಿವು ಬರುವ ಹೊತ್ತಿಗೆ ಅಸ್ಪೃಶ್ಯತೆಯ ಕಹಿಯನ್ನು ಉಂಡೂಉಂಡು ಸಾಕಾಗಿ ಕೊನೆಗೊಮ್ಮೆ ಅಸ್ಪೃಶ್ಯತೆಯ ಹುಟ್ಟಡಗಿಸುವ ಭೀಮಸಂಕಲ್ಪ ಮಾಡಿದ.

ತನ್ನಂತೆಯೇ ಅಸ್ಪೃಶ್ಯತೆಯ ಕರಿನೆರಳಲ್ಲಿ ನಲುಗುತ್ತಿರುವ ದೀನದಲಿತರ ಉದ್ಧಾರಕ್ಕಾಗಿ ತನ್ನ ಇಡೀ ಬದುಕನ್ನು ಮೀಸಲಿಟ್ಟ. ಹೀಗೆ ಅಸ್ಪೃಶ್ಯತೆಯ ವಿರುದ್ಧ ಸಮರ ಸಾರಿ ಭೀಮ ಪ್ರತಿಜ್ಞೆಗೈದ ಆ ಹುಡುಗ ಬೇರಾರು ಅಲ್ಲ. ಇಂದು ಭಾರತೀಯರ ಕಣ್ಣಲ್ಲಿ ಮಹಾಮಾನವತಾವಾದಿಯಾಗಿ ಕಂಗೊಳಿಸುತ್ತಿರುವ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌.

ನದಿಯ ದಿಕ್ಕನ್ನೇ ಬದಲಾಯಿಸಿದವರು

ಭೀಮರಾವ್‌ ರಾಂಜೀ ಅಂಬೇಡ್ಕರ್‌ ಸ್ವತಂತ್ರ ಭಾರತದ ರೂಪೀಕರಣದಲ್ಲಿ ಎದ್ದು ಕಂಡ ಹೆಸರು. ಈ ದೇಶದ ಸಾಂಪ್ರದಾಯಿಕ ಮಾದರಿಗಳನ್ನು ಒಡೆದು ಮಾನವೀಯತೆಗಾಗಿ ಭುಗಿಲೆದ್ದ ಮನಸ್ಸು. ಅವರು ಒಂದು ಮಾತು ಹೇಳಿದ್ದರು; ‘ನಾನೊಂದು ಕಲ್ಲು ಬಂಡೆಯಂತೆ, ಕರಗುವುದಿಲ್ಲ, ಆದರೆ ನದಿಯ ದಿಕ್ಕನ್ನೇ ಬದಲಿಸುವವನು’ ಎಂದು.

ಮೊತ್ತಮೊದಲ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದೂ, ಆ ಪಕ್ಷದ ಸದಸ್ಯರಾಗದೇ ಹಾಗೆ ಉಳಿದುಕೊಂಡದ್ದಕ್ಕೆ ಉತ್ತರ ರೂಪವಾಗಿ ಆ ಮಾತು ಹೇಳಿದ್ದರು. ಅವರು ಪ್ರವಾಹದಲ್ಲಿ ಒಂದಾದವರಲ್ಲ. ಹರಿಯುವ ದಿಕ್ಕನ್ನೇ ಬದಲಿಸಿದವರು.

ಅವರಾಡಿದ ಮಾತು ತನ್ನ ಜನರನ್ನು, ದೇಶದ ಇತಿಹಾಸದ ಮುಂಚೂಣಿಗೆ ತಂದ ರೀತಿಯನ್ನು ಬಿಂಬಿಸಿದಂತಿತ್ತು. ಹುಟ್ಟಿನಿಂದ ಅಂತ್ಯದವರೆಗೆ ಅಂಬೇಡ್ಕರ್‌ ಬದುಕಿದ ಬಗೆ ರೋಚಕ, ವಿಸ್ಮಯಕಾರಿ. ಅವರು ಬದುಕಿದ್ದ 65 ವರ್ಷಗಳ ಕಾಲ ಈ ನಾಡಿನಲ್ಲಿ ಎಷ್ಟೋ ಪ್ರವಾಹಗಳಿದ್ದವು. ಆದರೂ ಅಂಬೇಡ್ಕರ್‌ ಹಿಂದೂವಾದ, ಕಮ್ಯುನಿಸ್ಟ್‌ವಾದ, ಸಮಾಜವಾದ, ಗಾಂಧಿವಾದ ಇತ್ಯಾದಿ ಯಾವುದೇ ನದಿಗಳಲ್ಲಿ ಕರಗಲಿಲ್ಲ. ತಾನೇ ಸ್ವತಃ ಒಂದು ನದಿಯಾದರು.

ಹೋರಾಟದ ಪ್ರಜ್ಞೆ

ಭರತ ಭೂಮಿಯ ಉದ್ದಗಲಕ್ಕೂ ಕಣ್ಣುಕಾಣದಂತೆ ಆವರಿಸಿದ್ದ ಅಸಮಾನತೆಯ ಕಗ್ಗತ್ತಲಲ್ಲಿ ಕ್ರಾಂತಿದೀಪದಂತೆ 1891ರ ಏಪ್ರಿಲ್‌ 14ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದ ಮಹರ್‌ ಎಂಬ ದಲಿತ ಜನಾಂಗದಲ್ಲಿ ಅಂಬೇಡ್ಕರ್‌ ಜನಿಸಿದರು.

ತಂದೆ ಸುಭೇದಾರ್‌ ರಾಮ್‌ ಜೀ ಸಕ್ಬಾಲ್‌, ತಾಯಿ ಭೀಮಾಬಾಯಿ. ಇವರು ಕಬೀರ್‌ ಪಂಥಕ್ಕೆ ಸೇರಿದವರು. ಜಾತಿ ಧರ್ಮಗಳ ಭೇದಗಳಲ್ಲಿ ಇವರಿಗೆ ನಂಬಿಕೆ ಇರಲಿಲ್ಲ. ಹರಿಭಜನೆ ಮಾಡುವವರೆಲ್ಲ ದೇವರಿಗೆ ಸೇರಿದವರೆಂಬ ಭಾವ ಇವರದು.

ಇವರು ಸತಾರಾ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಅಸ್ಪೃಶ್ಯತೆಯ ಬಿಸಿ ಕ್ಷಣಕ್ಷಣವೂ ಸುಡುತ್ತಲೇ ಇತ್ತು. ಇದೆಲ್ಲ ಏಕೆಂದು ಬಾಲಕ ಅಂಬೇಡ್ಕರರಿಗೆ ಅರ್ಥವಾಗುತ್ತಿರಲಿಲ್ಲವಾದರೂ ಕ್ರಮೇಣ ಬುದ್ಧಿ ಬೆಳೆದಂತೆ ತನಗಾಗುತ್ತಿರುವ ಅಪಮಾನ, ಮೇಲ್ಜಾತಿ ಎನಿಸಿಕೊಂಡಿರುವ ಅವಿವೇಕಿಗಳಿಂದ ನಡೆಯುತ್ತಿರುವ ಶೋಷಣೆ, ದಬ್ಬಾಳಿಕೆ ಇವರ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಿದ್ದವು. ಇದರ ಪರಿಣಾಮ ಹಿಂದೂ ಧರ್ಮಕ್ಕೆ ಅಂಟಿದ ಜಾತೀಯತೆಯ ವಿರುದ್ಧ ವಿದ್ಯಾರ್ಥಿ ದಿಸೆಯಲ್ಲೇ ಇವರು ಭೀಮಖಡ್ಗವನ್ನು ಮಸೆಯತೊಡಗಿದ್ದರು.

ಅಂಬೇಡ್ಕರರಿಗೆ ಸಂಸ್ಕೃತ ಕಲಿಯಬೇಕೆಂಬ ಮಹದಾಸೆಯಿತ್ತು. ಆದರೆ ಕೀಳ್ಜಾತಿಯವರು ಇದನ್ನುಓದಬಾರದೆಂದು ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ ಇವರು ಬಗ್ಗಲಿಲ್ಲ. ಬದಲಿಗೆ ಹಠತೊಟ್ಟವರಂತೆ ಸಂಸ್ಕೃತ ಕಲಿತು ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ‘ಆಧುನಿಕ ಮನು’ಎಂಬ ಕೀರ್ತಿಗೆ ಪಾತ್ರರಾದರು. 1907ರಲ್ಲಿ ಮೆಟ್ರಿಕ್ಯೂಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಬೇಡ್ಕರರಿಗೆ ಆ ವರ್ಷ ವೇರಮಾ ಬಾಯಿಯೊಂದಿಗೆ ವಿವಾಹವಾಯಿತು.

ಆನಂತರ ಅವರು ಮುಂಬೈನ ಎಲ್ಫಿನ್‌ಸ್ಟನ್‌ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್‌ ಮುಗಿಸಿ 1921ರಲ್ಲಿ ಬಿ.ಎ. ಪದವೀಧರರಾದರು. ನಂತರ ಬರೋಡ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್‌ ಆಗಿ ನೇಮಕಗೊಂಡರು. ಆದರೆ ಜ್ಞಾನದ ಹಸಿವಿನಿಂದ ಇವರು ಓದುವ ಹಠಕ್ಕೆ ಬಿದ್ದರು.

ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮಲ್ಲೇ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಕಳುಹಿಸಿದರು.

ಅಲ್ಲಿ ಎಂ.ಎ ಪದವಿಯೊಡನೆ ಪಿಹೆಚ್‌ಡಿಯನ್ನೂ ಗಳಿಸಿ 1917ರ ಆಗಸ್ಟ್‌ 21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಜ್ಞಾನದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟುಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಹೋದ ಇವರು 1922ರಲ್ಲಿ ಬ್ಯಾರಿಸ್ಟರ್‌ ಎಂಬ ಪದವಿಯೊಡನೆ ಭಾರತಕ್ಕೆ ವಾಪಸ್ಸಾದರು.

ಸಿಡಿದೆದ್ದ ‘ಮೂಕನಾಯಕನ’

ವಿದೇಶದಲ್ಲಿ ಕಲಿತು ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್‌ ಪದವಿಗಳನ್ನು ಗಳಿಸಿ ಅಂಬೇಡ್ಕರ್‌ ಅವರು ಸ್ವದೇಶಕ್ಕೆ ಬಂದಿದ್ದರೂ ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನುಅಪಮಾನಿಸುತ್ತಿತ್ತು. ಆಗ ಅಂಬೇಡ್ಕರರು ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನಜಾಗೃತಿಗೆ ನಿಂತರು. ‘ಬಹಿಷ್ಕೃತ ಹಿತಕಾರಿಣಿ’ ಎಂಬ ಸಂಘಟನೆಗಳನ್ನು ಕಟ್ಟಿಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಾ ದಲಿತರ ಪಾಲಿಗೆ ಅಕ್ಷರಶಃ ತೋರು ಬೆರಳಾಗಿದ್ದರು.

ಇವರ ಚೌದರ್‌ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಾಯಿತು. ಹೀಗೆ ದಲಿತರ ಪರ ಇವರ ಕ್ರಾಂತಿ ಕಹಳೆ ನಿಧಾನವಾಗಿ ದೇಶದೆಲ್ಲೆಡೆ ಮೊಳಗತೊಡಗಿತ್ತು. ಅದೇ ಕಾಲಕ್ಕೆ ಎರಡನೇ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಅದರಲ್ಲಿ ಪ್ರಥಮ ಪ್ರಾಶಸ್ತ್ಯವೇ ಅಂಬೇಡ್ಕರವರಿಗೆ ದೊರಕಿತ್ತು.

ಹಾಗೆಯೇ ಭಾರತ ಸ್ವಾತಂತ್ರ್ಯಗಳಿಸಿದ ನಂತರ ನೆಹರು ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರರು ಭಾರತ ದೇಶಕ್ಕೆ ಸಶಕ್ತ ‘ಸಂವಿಧಾನ’ ನೀಡಿ ಸಂವಿಧಾನದ ಶಿಲ್ಪಿಯಾದರು. ಅಧಿಕಾರ ಇರಲಿ ಇಲ್ಲದಿರಲಿ ಅಂಬೇಡ್ಕರ್‌ರವರು ಇಟ್ಟಹೆಜ್ಜೆಯೆಲ್ಲಾ ಅಸ್ಪೃಶ್ಯತಾ ನಿವಾರಣೆಗಾಗಿನ ಪ್ರತಿಜ್ಞೆಯಾಗಿರುತ್ತಿತ್ತು. ಅಂತೆಯೇ ದಲಿತರ ಏಳ್ಗೆಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು.

ಕ್ರಾಂತಿ ಪುರುಷ ಜನ್ಮವೆತ್ತಿಲ್ಲದಿದ್ದರೆ..

ಭಾರತದಲ್ಲಿ ಅಂಬೇಡ್ಕರ್‌ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂ ಅವರಂತಹ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಸಾಧ್ಯವಾದದ್ದು.

ಅಂಬೇಡ್ಕರ್‌ ಎಂಬ ಮಹಾನದಿ ಈ ದೇಶದಲ್ಲಿ ಹುಟ್ಟಿಹರಿಯದಿದ್ದರೆ ಇದಾವುದೂ ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರರ ಇಡೀ ಜೀವನ ಅಸ್ಪೃಶ್ಯರæನಿಸಿಕೊಂಡವರಿಗೆ ನ್ಯಾಯವನ್ನೂ ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟುಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂಧರ್ಮದ ಅಸಮಾನತೆಯಿಂದ ರೋಸಿ ಹೋಗಿದ್ದ ಅವರು ಬುದ್ಧನ ಕಾರುಣ್ಯದಲ್ಲಿ ಆಕರ್ಷಿತರಾಗಿ 1956ರ ಅಕ್ಟೋಬರ್‌ 14ರಂದು ಬೌದ್ಧ ಧರ್ಮಕ್ಕೆ ಸೇರಿದರು.

1956ರ ಡಿಸೆಂಬರ್‌ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರರಿಗೆ ಮರಣೋತ್ತರವಾಗಿ ಭಾರತ ಸರ್ಕಾರವು 1991ರಲ್ಲಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ನಿಜಕ್ಕೂ ಅಂಬೇಡ್ಕರ್‌ ಅವರು ಇಂದಿಗೂ ಸಹ ತಮ್ಮ ಸಾಧನೆಗಳ ಮೂಲಕ ಭಾರತರತ್ನವೇ ಆಗಿದ್ದಾರೆ.

ಡಿ.06 ಅಂಬೇಡ್ಕರ್ ಮಹಾ ಪರಿನಿರ್ವಾಣಧ ದಿನ. ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟಿದ್ದರಿಂದಲೇ ದಲಿತರು ಮುನ್ನಲೆಗೆ ಬರಲು ಸಾಧ್ಯವಾದದ್ದು. ಭಾರತೀಯರ ಕಣ್ಣಲ್ಲಿ ಮಹಾ ಮಾನವತಾವಾದಿಯಾಗಿ ಕಂಗೊಳಿಸುತ್ತಿರುವ ಸಂವಿಧಾನ ಶಿಲ್ಪಿ ಇವರು. 

- ಬನ್ನೂರು ಕೆ ರಾಜು 

Follow Us:
Download App:
  • android
  • ios