ಬೆಂಗಳೂರು: ರಾಜ್ಯ ಬಜೆಟ್‌ ಅನ್ನು ಗುರುವಾರ ಉಭಯ ಸದನಗಳಲ್ಲಿ ಅನುಮೋದನೆ ಪಡೆದ ಬಳಿಕ ರಾಜ್ಯಪಾಲರ ಅಂಗೀಕಾರಕ್ಕೆ ರವಾನಿಸಲಾಗಿದ್ದು, ಎರಡು ದಿನದ ಒಳಗಾಗಿ ರಾಜ್ಯಪಾಲರು ಅಂಗೀಕಾರ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡಿಸಿರುವ ಹಣಕಾಸು ಬಿಲ್‌ಗೆ ರಾಜ್ಯಪಾಲರು ಅಂತಿಮ ಮುದ್ರೆ ಒತ್ತಿದರೆ, ಸೋಮವಾರ ಅಥವಾ ಮಂಗಳವಾರ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಬಳಿಕ ಹಣಕಾಸು ಇಲಾಖೆಯು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ ವಿದ್ಯುತ್‌ ದರ, ಅಬಕಾರಿ ಮೇಲಿನ ತೆರಿಗೆ ಹೆಚ್ಚಳವೂ ಜಾರಿಗೆ ಬರಲಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ವೈಮಾನಿಕ ಇಂಧನ ಹೆಚ್ಚಳ:  ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಉಡಾನ್‌ ಯೋಜನೆ ಬೆಂಬಲಿಸಲು ಲಘು ವಿಮಾನಗಳಿಗೆ ಮಾರಾಟವಾಗುವ ವೈಮಾನಿಕ ಇಂಧನ ಮೇಲಿನ ಮಾರಾಟ ತೆರಿಗೆಯನ್ನು ಶೇ.28 ರಿಂದ ಶೇ.5ಕ್ಕೆ ಇಳಿಕೆ ಮಾಡುವುದಾಗಿ ಹೇಳಿದ್ದರು.

ಇದನ್ನು ಕುಮಾರಸ್ವಾಮಿ ಮತ್ತೆ ಹೆಚ್ಚಳ ಮಾಡಿದ್ದು, ವೈಮಾನಿಕ ಇಂಧನ ಮೇಲಿನ ತೆರಿಗೆಯನ್ನು ಶೇ.28ರಷ್ಟುಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಇನ್ನು ಕೊಳವೆ ಮಾರ್ಗದ ಮೂಲಕ ಪೂರೈಕೆ ಮಾಡುವ ನೈಸರ್ಗಿಕ ಅನಿಲ ಶೇ.5.5 ರಷ್ಟಾಗಲಿದೆ.