ಹುನಗುಂದ: ಕೂಡಲಸಂಗಮ ಪ್ರವೇಶಿಸಲು ನನಗೆ ಅವಕಾಶ ನೀಡಬಾರದು ಎನ್ನಲು ರಂಭಾಪುರಿ ಶ್ರೀಗಳಿಗೆ ಯಾವ ಅಧಿಕಾರವಿದೆ? ಶ್ರೀಗಳ ಹೇಳಿಕೆ ಅವರ ಮೂರ್ಖತನಕ್ಕೆ ಸಾಕ್ಷಿ. ಎಂದು  ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ರಂಭಾಪುರಿ ಶ್ರೀಗಳ ವಿರುದ್ಧ ಕಿಡಿಕಾರಿದ್ದಾರೆ.

ಕೂಡಲಸಂಗಮದಲ್ಲಿ ಪೀಠ ಸ್ಥಾಪಿಸಿದ್ದೇವೆ. ನಾನು ಇಲ್ಲೇ ನೆಲೆಸುತ್ತೇನೆ ಎಂದು ಮಾತೆ ಮಹಾದೇವಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮ ಪ್ರವೇಶಿಸಲು ಮಾತೆ ಮಹಾದೇವಿ ಅವರಿಗೆ ಅವಕಾಶ ನೀಡಬಾರದೆಂಬ ರಂಭಾಪುರಿ ಶ್ರೀಗಳ ಹೇಳಿಕೆ ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಂಭಾಪುರಿ ಪೀಠವು ಶರಣ ಸಂಸ್ಕೃತಿಯ ಪೀಠ ಎಂದು ಪ್ರತಿಪಾದಿಸಿದ್ದಾರೆ.

ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಉಳವಿಯಲ್ಲಿ ಲಿಂಗೈಕ್ಯರಾದ ಮೇಲೆ ವೀರಮಾತೆ  ಅಕ್ಕನಾಗಲಾಂಬಿಕೆಯವರು ರುದ್ರಮುನಿ ದೇವರೊಡನೆ ಸಂಚಾರ ಮಾಡುತ್ತಾ ಮಲೆನಾಡಿನಲ್ಲಿ ಒಂದು  ಧರ್ಮಪೀಠ ಇರಬೇಕೆಂದು ಬಾಳೆಹೊನ್ನೂರಿನಲ್ಲಿ ಸ್ಥಾಪಿಸಿ, ರೇವಣ್ಣಸಿದ್ದೇಶ್ವರರ ಮಗ ರುದ್ರ ಮುನಿದೇವರನ್ನು ಪೀಠಾಧಿಕಾರಿಯನ್ನಾಗಿ ಮಾಡಿದರು.

ಇಂಥ ಶರಣ ಸಂಸ್ಕೃತಿಯ ಪೀಠದ ಪೀಠಾಧಿಕಾರಿಯಾಗಿ ಶರಣರ ತತ್ವಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ರಂಭಾಪುರಿ ಶ್ರೀಗಳ ವರ್ತನೆ ಖಂಡನೀಯ ಎಂದು ಮಾತೆ ಮಹಾದೇವಿ ಹೇಳಿದ್ದಾರೆ.