ಮಂಗಳೂರು: ದೇಶದ ಅಲ್ಲೋ-ಇಲ್ಲೋ ನಡೆಯುತ್ತಿದ್ದ ‘ಗ್ಯಾಂಗ್ ರೇಪ್’ ಎಂಬ ಸುದ್ದಿಗಳನ್ನು ಪತ್ರಿಕೆ, ಟಿವಿ, ವೆಬ್‌ಸೈಟ್‌ಗಳಲ್ಲಿ ಓದಿ ಗೊತ್ತಿರುವ ಮಂಗಳೂರಿನ ಮಂದಿಗೆ, ತಮ್ಮ ಹಿತ್ತಲಿನಲ್ಲೇ ನಡೆದ ‘ಗ್ಯಾಂಗ್ ರೇಪ್’ ಎಂಬ ಭೀಭತ್ಸ ಘಟನೆಯ ಬಗ್ಗೆ ಹರಿದಾಡುತ್ತಿರುವ ‘ವದಂತಿ‘ ಬೆಚ್ಚಿಬೀಳಿಸಿತ್ತು.

‘ಗ್ಯಾಂಗ್‌ರೇಪ್’ ಎಂಬ ನಾಲ್ಕಕ್ಷರದ ಆ ಗುಸುಗುಸು, ವಿಶೇಷವಾಗಿ, ಹೆಣ್ಣು ಹೆತ್ತವರಿಗೆ ಒಳಗಿಂದೊಳಗೆ ಒಂದು ರೀತಿಯ ಭಯ, ಸಣ್ಣದಾದ ನಡುಕ, ಆತಂಕವನ್ನೂ ಹುಟ್ಟುಹಾಕಿತ್ತು.

ಹೌದು, ಇಂತಹ ಹೀನ ಘಟನೆ ನಡೆಯಬಾರದು, ನಡೆದಿದ್ದರೆ ಕಿರಾತಕರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಇಲ್ಲದಿದ್ದರೆ ‘ಕಾನೂನು ಮತ್ತು ಸುವ್ಯವಸ್ಥೆ’ಗೆ ಅರ್ಥವಿರುವುದಿಲ್ಲ, ಜನರಿಗೂ ಅದರ ಮೇಲೆ ವಿಶ್ವಾಸವಿರುವುದಿಲ್ಲ. ರಾತ್ರಿಯ ಕತ್ತಲೆ ಕೂಪದಲ್ಲಿ ಮರೆಯಾಗಿದ್ದ ಭೀಕರ ದೃಶ್ಯಕ್ಕೆ, ಅರಬ್ಬೀ ಸಮುದ್ರದ ಗರ್ಭಕ್ಕೆ ಅಗೋಚರವಾಗಿ ಸೇರಿದ್ದ ಹೆಣ್ಣಿನೊಡಲಿನಿಂದ ಹರಿದ ರಕ್ತಕ್ಕೆ, ಕಣ್ಣೀರಿನ ರೂಪದಲ್ಲಿ ಹೊರಬಂದು ಗಾಳಿಯಲ್ಲಿ ಆವಿಯಾಗಿದ್ದ ಹೆಣ್ಣಿನ ರೋಧನೆಗೆ, ಹಾಗೂ  ಕಾಮುಕರ ಅಟ್ಟಹಾಸದಲ್ಲಿ ಕರಗಿಹೋಗಿದ್ದ ಹೆಣ್ಣಿನ ಚೀರಾಟಕ್ಕೆ ಮಂಗಳೂರಿನ ಪಣಂಬೂರು ಪೊಲೀಸರು ಕಣ್ಣಾಗಿದ್ದಾರೆ, ಕಿವಿಯಾಗಿದ್ದಾರೆ, ಧ್ವನಿಯಾಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ನ.18ಕ್ಕೆ ನಡೆದಿದ್ದ ಈ ಘಟನೆಯ ಸಂತ್ರಸ್ತೆ ಹೊರರಾಜ್ಯದ ಯುವತಿ, ಜಿಲ್ಲೆಯಲ್ಲಿ ಕಾರ್ಮಿಕಳಾಗಿ ದುಡಿಯುತ್ತಿದ್ದವಳು. ಗೆಳೆಯನ ಜೊತೆಗೆ ತೋಟ ಬೆಂಗರೆ ಬೀಚ್‌ಗೆ ಬಂದಾಗ,  ದುಷ್ಕರ್ಮಿಗಳ ಗುಂಪು ಯುವಕನನ್ನು ಹಿಡಿದಿಟ್ಟು, ಆತನ ಮುಂದೆಯೆ ಆಕೆಯ ಮೇಲೆ ಗ್ಯಾಂಗ್ ರೇಪ್ ಎಸಗಿತ್ತು.  ಹೊಟ್ಟೆಪಾಡಿಗಾಗಿ ದೂರದೂರಿನಿಂದ ಬಂದ ಅಸಹಾಯಕ ಜೋಡಿಗೆ, ನೋವಿನಿಂದ ನರಳಾಡುವ, ಭಯದಿಂದ ಕಂಪಿಸುವ ಹೊರತು ಇನ್ನೇನು ತೋಚದೆ ಮೌನಕ್ಕೆ ಶರಣಾಗಿದ್ದರು. 

ಒಂದು ಹಂತದಲ್ಲಿ ಮುಚ್ಚಿಹೋಗಲಿದ್ದ ಈ ಘೋರ ಅತ್ಯಾಚಾರ ಪ್ರಕರಣವನ್ನು ಬೆಳಕಿಗೆ ತಂದದ್ದು, ಮರುಜೀವ ತುಂಬಿದ್ದು, ಪಣಂಬೂರು ಪೊಲೀಸರು. ಸುವರ್ಣನ್ಯೂಸ್.ಕಾಂಗೆ ಸಿಕ್ಕಿರುವ ಮಾಹಿತಿ ಪ್ರಕಾರ,  ‘ಗ್ಯಾಂಗ್ ರೇಪ್’ ಎಂಬ ವದಂತಿಯ ಬೆನ್ನಟ್ಟಿದ ಇನ್ಸ್ಪೆಕ್ಟರ್ ರಫೀಕ್ ಎಂ. ಎಂಬ ದಿಟ್ಟ ಅಧಿಕಾರಿಯ ತಂಡ, ವದಂತಿಗಳ ಗದ್ದಲದ ನಡುವೆ ಸುದ್ದಿಯನ್ನು ಮೊದಲು ಖಚಿತಪಡಿಸುವ ಕೆಲಸ ಮಾಡಿತ್ತು. 

ಹೌದು, ಗ್ಯಾಂಗ್ ರೇಪ್ ನಡೆದಿದೆ ಎಂದು ಖಚಿತವಾಗುತ್ತಿದ್ದಂತೆ, ಪೊಲೀಸರ ಮುಂದಿನ ದೊಡ್ಡ ಸವಾಲು ‘ಯಾರು?’ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದಾಗಿತ್ತು. ಹೆಣ್ಣು ಯಾರಂತ ಗೊತ್ತಿಲ್ಲ... ದೂರು ದಾಖಲಾಗಿಲ್ಲ... ಮಂಗಳೂರು ಬೀಚುಗಳಿಗೆ ಭೇಟಿ ನೀಡುವ ಸಾವಿರಾರು ಮಂದಿಯಲ್ಲಿ ಆ ‘ಸಂತ್ರಸ್ತೆ’ಯನ್ನು ಹುಡುಕುವುದು ಸರಿಸುಮಾರು ಅಸಾಧ್ಯವಾದ ಕೆಲಸ!

ಧೃತಿಗೆಡದ ರಫೀಕ್’ರ ತಂಡ ಜಿಲ್ಲೆಯ ಎಲ್ಲಾ ಕ್ಲಿನಿಕ್-ಆಸ್ಪತ್ರೆಗಳನ್ನು ತಡಕಾಡಿದೆ. ಊಹುಂ, ಆಸ್ಪತ್ರೆಗೆ ಹೋಗದೇ ನೋವನ್ನೇ ಮಾತ್ರೆಯಾಗಿ ನುಂಗಿದ ಆ ಹೆಣ್ಣು ಜೀವ ಪೊಲೀಸರಿಗೆ ಸಿಗುವುದಾದರೂ ಹೇಗೆ? ಮಂಗಳೂರು ನಗರ ಆಯುಕ್ತ ಟಿ.ಆರ್. ಸುರೇಶ್‌ರ ಸಕಾಲಿಕ ಬೆಂಬಲ, ಡಿಸಿಪಿಗಳಾದ ಹನುಮಂತರಾಯ ಹಾಗೂ ಉಮಾಪ್ರಶಾಂತ್ ಮಾರ್ಗದರ್ಶನ, ಎಸಿಪಿ ಮಂಜುನಾಥ್ ಶೆಟ್ಟಿ ಸಹಕಾರದಿಂದ ಕೊನೆಗೂ ರಫೀಕ್ ತಂಡ ಆಕೆಯನ್ನು ಪತ್ತೆಹಚ್ಚಲು ಯಶಸ್ವಿಯಾಗಿದ್ದಾರೆ.  ಅವರ ಮನವೊಲಿಸಿ ಪ್ರಕರಣ ದಾಖಲಿಸಿ, ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರ ತಂಡ  ಮೂವರು ಅಪ್ರಾಪ್ತರು ಸೇರಿದಂತೆ 7 ಮಂದಿಯನ್ನು ಬಂಧಿಸಿದೆ.

ಸಾರ್ವಜನಿಕ ವಲಯದಲ್ಲಿ ಪಣಂಬೂರು ಪೊಲೀಸರ ಈ ಕ್ರಮ ವ್ಯಾಪಕ ಪ್ರಶಂಸೆಗೂ ಪಾತ್ರವಾಗಿದೆ. ಗಾಳಿಯಲ್ಲಿ ಹರಿದು ಬಂದ ಬರೇ ಒಂದು ಸುದ್ದಿಯನ್ನು ಸ್ವಯಂಪ್ರೇರಿತವಾಗಿ ಬೆನ್ನತ್ತಿ, ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿರುವುದು, ಮಹಿಳಾ ಸುರಕ್ಷತೆ ನಿಟ್ಟಿನಲ್ಲಿ ಪೊಲೀಸರ ಬದ್ಧತೆಯನ್ನು ಪ್ರದರ್ಶಿಸಿದೆ. ಮಂಗಳೂರು ಪೊಲೀಸರಿಗೆ ಸೋಶಿಯಲ್ ಮೀಡಿಯಾದಲ್ಲೂ ಭೇಷ್‌ಗಳ ಸುರಿಮಳೆಯಾಗಿದೆ. ಮಂಗಳೂರು ಜನರ ಪಾಲಿಗೆ ರಫೀಕ್ ಈಗ ‘ಸಿಂಗಂ’ ಆಗಿದ್ದಾರೆ.. 

 

‘ನಾವಿದ್ದೇವೆ, ಚಿಂತಿಸಬೆಡಿ, ಪಿಶಾಚಿಗಳನ್ನು ಪಾತಾಳದಿಂದಲಾದರೂ ಹುಡುಕಿ ತೆಗೆಯುತ್ತೇವೆ’ ಎಂಬ ಧೃಡಸಂಕಲ್ಪದೊಂದಿಗೆ ಕೆಲಸಮಾಡಿದ ಮಹಿಳಾ ಠಾಣಾ ಪಿಐ ಕಲಾವತಿ,  ಪಿಎಸ್‌ಐ ಉಮೆಶ್ ಕುಮಾರ್,  ಮಂಗಳೂರು ರೌಡಿ ನಿಗ್ರಹ ದಳದ ಎ.ಎಸ್. ಮೊಹಮ್ಮದ್, ಕುಶಲ ಮಣಿಯಾಣಿ, ವಿಜಯ್ ಕಾಂಚನ್. ಸತೀಶ್ ಎಂ, ಕರಣ್ ಕಾಳಿ ಮುಂತಾದವರಿಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಇದನ್ನೂ ಓದಿ: 10 ಸಾವಿರ ಬಗೆ ಬಗೆ ಅಡುಗೆ ಮಾಡೋ ನಳಪಾಕ ಮಹಾರಾಜ!

ಒಟ್ಟಾರೆಯಾಗಿ,  ತಮ್ಮ ಚುರುಕು ಕಾರ್ಯಾಚರಣೆಯಿಂದ, ಸಣ್ಣದಾಗಿ ಕಂಪಿಸಲು ಆರಂಭಿಸಿದ ನಾಗರಿಕ ಸಮಾಜಕ್ಕೆ ಮಂಗಳೂರು ಪೊಲೀಸರು ಕಾನೂನಿನ ಅಭಯ ನೀಡಿದ್ದಾರೆ. ಹಾಗೇನೆ, ‘ನಾವೇನು ಮಾಡಿದ್ರೆ ನಡೆಯುತ್ತೆ’ ಎಂಬ ಸೊಕ್ಕು ಇಟ್ಟುಕೊಂಡವರಿಗೂ ಎಚ್ಚರ ನೀಡಿ ಮಂಗಳೂರು ಪೊಲೀಸರು ದೇಶಕ್ಕೆ ಮಾದರಿಯಾಗಿದ್ದಾರೆ.