ಮಲಪ್ಪುರಂ(ಫೆ.13): ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ...ಅಬ್ಬಬ್ಬಾ ಕೇಳಲು ಕಿವಿಗೆ ಅದೆಷ್ಟಯು ಇಂಪು ಈ ಶಬ್ದಗಳು. ಆದರೆ ಇವೆಲ್ಲಾ ತೂಕದ ಶಬ್ದಗಳು ದೇಶದ ಸಾಂವಿಧಾನಿಕ ದೇಗುಲ ಸಂಸತ್ತಿನಲ್ಲಷ್ಟೇ ಕೇಳಲು ಚೆನ್ನ. ನಾಗರಿಕ(?)ಸಮಾಜ ಎಂಬ ಜಗತ್ತಿನಲ್ಲಿ ಇವುಗಳಿಗೆ ಬೆಲೆ ಇಲ್ಲ.

ಜಗತ್ತು ಅದೆಷ್ಟೇ ಮುಂದುವರೆಯಲಿ ನಮ್ಮ ಸಮಾಜ ಮಾತ್ರ ಇನ್ನೂ ಅದೇ ಮಧ್ಯಯುಗದ ಅಂಧಾಭಿಮಾನಿಯಾಗಿದೆ. ಆಗಿನ ಕಾನೂನುಗಳನ್ನೇ ಶ್ರೇಷ್ಠತೆಯ ತೊಟ್ಟಿಲಲ್ಲಿ ಇರಿಸಿ ಮೆರೆದಾಡುತ್ತಿವೆ. ಅಂತಹ ಅಸಮಾನ ಕಾನೂನುಗಳಲ್ಲಿ ಮಹಿಳೆಯರ ಸ್ವಾತಂತ್ರ್ಯ ಹರಣ ಕೂಡ ಒಂದು.

ಮದುವೆಯಲ್ಲಿ ಮಹಿಳೆಯೊಬ್ಬಳು ಮುಖ ತೋರಿಸಿದಳು, ನೆಂಟರೊಂದಿಗೆ ಹಾಡಿಗೆ ಡ್ಯಾನ್ಸ್ ಮಾಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ಬಹಿಷ್ಕಾರ ಹಾಕಿದ ಅಮಾನುಷ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

ಹೌದು, ಇಲ್ಲಿನ ಡ್ಯಾನಿಶ್ ರಿಯಾಜ್ ಎಂಬಾತ ತನ್ನ ಪತ್ನಿ ಫಾತಿಮಾಳೊಂದಿಗೆ ಸಹೋದರ ಅಬ್ದುಲ್ ಅವರ ಮದುವೆಗೆ ಹೋಗಿದ್ದರು. ಈ ವೇಳೆ ಫಾತಿಮಾ ಮುಖಕ್ಕೆ ಪರದೆ ಹಾಕದೇ ಫೋಟೋಗೆ ಪೋಸ್ ನೀಡಿದ್ದರು. ಅಲ್ಲದೇ ಅಬ್ದುಲ್ ಪತ್ನಿ ನಾಸ್ವಾ ಕೂಡ ಮುಖಕ್ಕೆ ಪರದೆ ಹಾಕಿರಲಿಲ್ಲ. 

ಅಲ್ಲದೇ ಫಾತಿಮಾ ಮದುವೆಗೆ ಬಂದ ಇತರರೊಂದಿಗೆ ಸೇರಿ ಹಾಡಿಗೆ ಸ್ಟೆಪ್ ಕೂಡ ಹಾಕಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಹಾಲ್ಲು ಸಮುದಾಯ, ಡ್ಯಾನಿಶ್ ರಿಯಾಜ್ ಅವರ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ.

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಡ್ಯಾನಿಶ್ ರಿಯಾಜ್, ಮಹಾಲ್ಲು ಸಮುದಾಯದ ಕಟ್ಟಳೆಗಳನ್ನು ನಮ್ಮ ಕುಟುಂಬ ಚಾಚೂ ತಪ್ಪದೇ ಪಾಲಿಸುತ್ತದೆ. ಆದರೆ ಈ ಅಚಾತುರ್ಯಕ್ಕೆ ಕ್ಷಮೆ ಕೋರಿದರೂ ಬಹಿಷ್ಕರ ಹಿಂಪಡೆಯಲು ಸಮುದಾಯ ನಿರಾಕರಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.