ನವದೆಹಲಿ[ಆ.14]: ಭಾರೀ ಕುತೂಹಲ ಮೂಡಿಸಿರುವ ಮಹದಾಯಿ ತೀರ್ಪು ಇಂದು ಸಂಜೆ 4 ಗಂಟೆಗೆ ಪ್ರಕಟವಾಗಲಿದ್ದು, ನ್ಯಾ. ಜೆ.ಎಂ ಪಾಂಚಾಳ್ ನೇತೃತ್ವದ ತ್ರಿಸದಸ್ಯ ಪೀಠದಿಂದ ಅಂತಿಮ ಆದೇಶ ಹೊರಡಿಸಲಿದ್ದಾರೆ.

ತ್ರಿಸದಸ್ಯ ಪೀಠ ಮಹದಾಯಿ ವಿವಾದವನ್ನು ಕಳೆದ 5 ವರ್ಷದಲ್ಲಿ 105 ದಿನಗಳ ಕಾಲ ವಿಚಾರಣೆ ನಡೆದಿದೆ. ಕರ್ನಾಟಕದ ಪರ ಅಶೋಕ್ ದೇಸಾಯಿ, ಮೋಹನ್ ಕಾತರಕಿ,ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದು,ರಾಜ್ಯಕ್ಕೆ 14.98 ಟಿಎಂಸಿ ನೀರನ್ನು ನ್ಯಾಯಾಧಿಕರಣ ಮುಂದೆ ಕೇಳಿದೆ.  ರಾಜ್ಯದ ಮನವಿಯಲ್ಲಿ 7 ಟಿಎಂಸಿ ಹೆಚ್ಚುವರಿ ನೀರಿನ ಬೇಡಿಕೆಯಿದೆ. 

ಮಹದಾಯಿ ಅಚ್ಚುಕಟ್ಟಲ್ಲಿ ಒಟ್ಟು 199.6 ಟಿಎಂಸಿ ನೀರು ಲಭ್ಯವಾಗಲಿದ್ದು, ಗೋವಾ 172 ಟಿಎಂಸಿ, ಮಹಾರಾಷ್ಟ್ರ 6.34 ಟಿಎಂಸಿ ಗೆ ಬೇಡಿಕೆ ಇಟ್ಟಿದೆ. ನ್ಯಾಯಾಧೀಕರಣ ಮುಂದೆ ಗೋವಾ ಪರ ಆತ್ಮರಾಮ್ ನಾಡಕರ್ಣಿ ವಾದ ಮಂಡಿಸಿದ್ದಾರೆ. 

ಕರ್ನಾಟಕದ ವಾದ ಏನು ?
ಹುಬ್ಬಳ್ಳಿ- ಧಾರವಾಡಕ್ಕೆ ಕುಡಿಯುವ ನೀರಿಗೆ ಸೂಕ್ತ ಪರ್ಯಾಯವಿಲ್ಲ ಆ ಕಾರಣದಿಂದ ಕೇಂದ್ರ ಜಲ ಆಯೋಗದ ಪ್ರಕಾರ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಕರ್ನಾಟಕಕ್ಕೆ ತನ್ನ ಪಾಲಿನ 14.98 ಟಿಎಂಸಿ ನೀರು ಬಳಕೆ ಮಾಡಲು ಅವಕಾಶ ನೀಡಬೇಕು. ಹೆಚ್ಚುವರಿಯಾಗಿ ಹುಬ್ಬಳ್ಳಿ - ಧಾರವಾಡಕ್ಕೆ ಕುಡಿಯಲು 7.56 ಟಿಎಂಸಿ ನೀರು ಬೇಕಾಗಿದೆ. ಮಲಪ್ರಭದ ಮೇಲಿನ ಒತ್ತಡ ಕಡಿಮೆ ಆಗಿ ಆ ನೀರನ್ನು ನೀರಾವರಿಗೆ ಬಳಸಬಹುದು. ಗೋವಾ ಸರ್ಕಾರ 113 ಟಿಎಂಸಿ ನೀರು ಮಹದಾಯಿಯಲ್ಲಿದೆ. ಗೋವಾ ಮಂಡಿಸಿರುವ ವಾದ ಸರಿಯಲ್ಲ ಮತ್ತು ತಪ್ಪು ದಾರಿಗೆಳೆಯುತ್ತಿದೆ. ಅಂತರರಾಜ್ಯ ನದಿಗಳಲ್ಲಿ ನೀರಿನ ಬಳಕೆಗೆ ಇನ್ನೊಂದು ರಾಜ್ಯದ ಅನುಮತಿ ಪಡೆಬೇಕಿಲ್ಲ ಎನ್ನುತ್ತದೆ ಕರ್ನಾಟಕದ ವಾದ. 

ಗೋವಾ ವಾದ ಏನು?
ಕಳಸಾ ಬಂಡೂರಿ ಯೋಜನೆಯು ಕುಡಿಯುವ ನೀರಿನ ಯೋಜನೆಯಲ್ಲ. ಕರ್ನಾಟಕ ಸರ್ಕಾರ ನೀರಾವರಿಗಾಗಿ ಮಾಡಿರುವ ಯೋಜನೆಯಾಗಿದೆ. 
ಮಹದಾಯಿಯನ್ನು ತಿರುಗಿಸಲು ಕರ್ನಾಟಕ ಮುಂದಾಗಿದೆ. ಹುಬ್ಬಳ್ಳಿ - ಧಾರವಾಡ ಪ್ರದೇಶ ಮಹಾದಾಯಿ ನದಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ನದಿ ಕೊಳ್ಳದ ಹೊರಗಿನ ಪ್ರದೇಶಗಳಿಗೆ ನೀರು ಹರಿಸಲು ಅವಕಾಶ ನೀಡಬಾರದು. ಹುಬ್ಬಳ್ಳಿ - ಧಾರವಾಡದ ಜನಸಂಖ್ಯೆಯ ಏರಿಕೆಯ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಒಂದು ವೇಳೆ ಯೋಜನೆಯನ್ನು ಜಾರಿಗೊಳಿಸಿದರೆ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಸಮುದ್ರಕ್ಕೆ ಸೇರುವ ನೀರು ವ್ಯರ್ಥ ಎಂಬ ಕರ್ನಾಟಕದ ನಿಲುವು ಸುಳ್ಳು ಎಂದು ಗೋವಾದ ವಾದವಾಗಿದೆ.