ಭೋಪಾಲ್‌: ಕಳೆದ 8 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 33 ಟ್ರಕ್‌ ಚಾಲಕರು ಮತ್ತು ಕ್ಲೀನರ್‌ಗಳನ್ನು ಹತ್ಯೆ ಮಾಡಿದ್ದ ಸರಣಿ ಹಂತಕರಿಬ್ಬರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ದೇಶದ ಇತಿಹಾಸದಲ್ಲೇ ಅತ್ಯಂತ ಭಯಾನಕ ಪ್ರಕರಣಗಳ ಪೈಕಿ ಇದೂ ಒಂದೆಂದು ಹೇಳಲಾಗಿದ್ದು, ಬಂಧಿತರ ತೀವ್ರ ವಿಚಾರಣೆ ಬಳಿಕ ಇನ್ನಷ್ಟು ಕೃತ್ಯ ಹೊರಬರುವ ನಿರೀಕ್ಷೆ ಇದೆ.

ಬಂಧಿತರನ್ನು ವೃತ್ತಿಯಲ್ಲಿ ಟೈಲರ್‌ ಆಗಿರುವ ಆದೇಶ್‌ ಖಂಬ್ರಾ (50) ಮತ್ತು ಜಯಕರಣ್‌ ಪ್ರಜಾಪ್ರತಿ (30) ಎಂದು ಗುರುತಿಸಲಾಗಿದೆ. ತಂಡದ ಇತರೆ ಸದಸ್ಯರ ಪತ್ತೆಗಾಗಿ ರಾಜ್ಯ ಪೊಲಿಸರು ಹುಡುಕಾಟ ನಡೆಸಿದ್ದಾರೆ.

ಹಗಲು ಟೈಲರ್‌ ರಾತ್ರಿ ಹಂತಕ: ಆದೇಶ್‌ ಖಂಬ್ರಾ ಹಗಲು ಹೊತ್ತಿನಲ್ಲಿ ಅತ್ಯಂತ ಸಜ್ಜನ ಟೈಲರ್‌ ರೀತಿಯಲ್ಲಿ ಇರುತ್ತಿದ್ದ. ರಾತ್ರಿಯಾಗುತ್ತಲೇ ತಂಡದ ಸದಸ್ಯರ ಜೊತೆಗೂಡಿ ಟ್ರಕ್‌ ಡ್ರೈವರ್‌ಗಳು ಮತ್ತು ಕ್ಲೀನರ್‌ಗಳ ಹತ್ಯೆ ಮಾಡುತ್ತಿದ್ದ. 2010ರಲ್ಲಿ ಹೀಗೆ ಮೊದಲ ಬಾರಿ ಹತ್ಯೆ ಮಾಡಿದ್ದ ಆದೇಶ್‌, ನಂತರದ 8 ವರ್ಷಗಳಲ್ಲಿ ತನ್ನ ತಂಡದ ಜೊತೆಗೂಡಿ 33 ಹತ್ಯೆ ಮಾಡಿದ್ದ ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಹೀಗಿರುತ್ತಿತ್ತು ಸಂಚು: ಆದೇಶ್‌ ಮತ್ತು ಆತನ ತಂಡ ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರದಲ್ಲಿ ಮೊದಲೇ ತಾವು ಯಾರನ್ನು ಹತ್ಯೆ ಮಾಡಬೇಕು ಎಂದು ನಿರ್ಧರಿಸುತ್ತಿತ್ತು. ಬಳಿಕ ಆ ಟ್ರಕ್‌ ಚಾಲಕ ಅಥವಾ ಕ್ಲೀನರ್‌ ಪರಿಚಯ ಮಾಡಿಕೊಳ್ಳುತ್ತಿತ್ತು. ಬಳಿಕ ಮದ್ಯಕ್ಕೆ ಮತ್ತು ಬರುವ ಪದಾರ್ಥ ಸೇರಿ ಕುಡಿಸುತ್ತಿತ್ತು. ಅವರು ನಿದ್ದೆಗೆ ಜಾರಿದ ಬಳಿಕ ಅವರನ್ನು ಹತ್ಯೆ ಮಾಡಿ ಲಾರಿಯೊಂದಿಗೆ ಪರಾರಿಯಾಗುತ್ತಿತ್ತು.

ಕದ್ದ ವಸ್ತು ಮಾರಾಟ: ಆದೇಶ್‌ ಮತ್ತು ಆತನ ಕಂಡ ಕದ್ದ ಲಾರಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿತ್ತು. ಜೊತೆಗೆ ಅದರಲ್ಲಿದ್ದ ವಸ್ತುಗಳನ್ನೂ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿತ್ತು.

ಮುಕ್ತಿಗಾಗಿ ಕೃತ್ಯ: ಹತ್ಯೆ ಬಗ್ಗೆ ಆದೇಶ್‌ನನ್ನು ಪ್ರಶ್ನಿಸಿದಾಗ ಆತ ವ್ಯಂಗ್ಯವಾಗಿ ಟ್ರಕ್‌ ಚಾಲಕರಿಗೆ ತಮ್ಮ ನೋವಿನಿಂದ ಮುಕ್ತಿ ನೀಡುತ್ತಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಅಂಕಲ್‌ ಪ್ರೇರಣೆ?: ಮಧ್ಯಪ್ರದೇಶದಲ್ಲಿ ಈ ಹಿಂದೆ 100 ಟ್ರಕ್‌ ಚಾಲಕರ ಹತ್ಯೆ ಮಾಡಿದ್ದ ಭಯಾನಕ ಪಾತಕಿ ಅಶೋಕ್‌ ಖಂಬ್ರಾನನ್ನು ಆದೇಶ್‌ ಅಂಕಲ್‌ ಎಂದು ಕರೆಯುತ್ತಿದ್ದು. ಆದೇಶ್‌ನ ಕೃತ್ಯಕ್ಕೂ ಅಂಕಲ್‌ ಪ್ರೇರಣೆಯಾಗಿರಬಹುದು ಎಂದು ಹೇಳಲಾಗಿದೆ.

ಸಿಕ್ಕಿದ್ದು ಹೀಗೆ: ಇತ್ತೀಚೆಗೆ ನಡೆದ 2 ಟ್ರಕ್‌ ಚಾಲಕರ ಹತ್ಯೆ ಪ್ರಕರಣದ ಬೆನ್ನತ್ತಿದ್ದ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು 3 ದಿನಗಳ ಹಿಂದೆ ಆದೇಶ್‌ನನ್ನು ಬಂಧಿಸಿದ್ದರು. ವಿಚಾರಣೆ ವೇಳೆಯಷ್ಟೇ 33 ಟ್ರಕ್‌ ಚಾಲಕರ ಹತ್ಯೆ ವಿಷಯ ಬೆಳಕಿಗೆ ಬಂದಿದೆ.