ಭೋಪಾಲ್‌[ಮೇ.22]: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ, ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಅವರ ವಿರುದ್ಧದ ಹಳೆಯ ಕೊಲೆ ಪ್ರಕರಣವೊಂದಕ್ಕೆ ಮರುಜೀವ ನೀಡಲು ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಇದು ಮತ್ತೊಂದು ಸುತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಸಮರಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿವೆ.

2007ರ ಡಿ.29ರಂದು ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕ ಸುನಿಲ್‌ ಜೋಶಿ ಅವರನ್ನು ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಸೇರಿದಂತೆ 8 ಜನರು ಆರೋಪಿಗಳಾಗಿದ್ದರು. ಈ ಕುರಿತು ತನಿಖೆ ನಡೆದು, ವಿಚಾರಣೆ ವೇಳೆ ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕಾಗಿ ಎಲ್ಲಾ ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ 2017ರಲ್ಲಿ ಖುಲಾಸೆಗೊಳಿಸಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿರಲಿಲ್ಲ.

ಇದೀಗ ಈ ಪ್ರಕರಣವನ್ನು ಮೇಲಿನ ಹಂತದ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾಗಿದೆ. ಈ ಕುರಿತು ಹೇಳಿಕೆ ನೀಡಿರುವ ರಾಜ್ಯದ ಕಾನೂನು ಖಾತೆ ಸಚಿವ ಪಿ.ಸಿ.ಶರ್ಮಾ, ಹಿಂದಿನ ಜಿಲ್ಲಾಧಿಕಾರಿಗಳು ಸ್ವಯಂ ತಾವೇ ಪ್ರಕರಣವನ್ನು ಮುಂದುವರೆಸದೇ ಇರಲು ನಿರ್ಧರಿಸಿದ್ದರು. ಹೀಗಾಗಿ ಪ್ರಕರಣದ ಕುರಿತು ವರದಿ ನೀಡುವಂತೆ ದೇವಾಸ್‌ನ ಹಾಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅವರ ವರದಿ ಆಧರಿಸಿ, ಕಾನೂನು ತಜ್ಞರಿಂದ ಸಲಹೆ ಪಡೆದು ಮುಂದುವರೆಯಲಾಗುವುದು ಎಂದು ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳ ಅನ್ವಯ ಭೋಪಾಲ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್‌ಸಿಂಗ್‌ ವಿರುದ್ಧ ಸಾಧ್ವಿ ಪ್ರಜ್ಞಾ ಜಯಗಳಿಸುವ ಸಾಧ್ಯತೆ ಹೆಚ್ಚಿದೆ.