ನವದೆಹಲಿ (ಜ. 12):  ‘ಮುಂಬರುವ ಲೋಕಸಭಾ ಚುನಾವಣೆ ಭಾರೀ ಹಣಾಹಣಿಯಿಂದ ಕೂಡಿರಲಿದೆ. ಅಲ್ಲದೆ, ದೇಶದ ದೃಷ್ಟಿಯಿಂದ ಫಲಿತಾಂಶ ಗಮನಾರ್ಹವಾದುದು’ ಎಂದು ಹೇಳಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಇದು ಮರಾಠರು ಮತ್ತು ಆಫ್ಘನ್‌ ಸೇನೆ ನಡುವೆ ನಡೆದ 3ನೇ ಪಾಣಿಪತ್‌ ಕದನ ಎಂದು ಬಣ್ಣಿಸಿದ್ದಾರೆ.

ಶನಿವಾರ ಆರಂಭವಾದ 2 ದಿವಸಗಳ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡಿದ ಅಮಿತ್‌ ಶಾ, ಮಹಾಮೈತ್ರಿಗೆ ಮುಂದಾಗಿರುವ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಇದೊಂದು ನಾಯಕನೇ ಇಲ್ಲದ ಅತೃಪ್ತರ ಗುಂಪು ಎಂದು ಟೀಕಿಸಿದರು. ಬಿಜೆಪಿ ತಾನು ಮಾಡಿರುವ ಸಮಾಜ ಕಲ್ಯಾಣ ಯೋಜನೆಗಳು ಮತ್ತು ಸಾಂಸ್ಕೃತಿಕ ರಾಷ್ಟ್ರೀಯ ಕಾರ್ಯಕ್ರಮಗಳಿಂದ ಚುನಾವಣೆಯಲ್ಲಿ ತನ್ನ ಪ್ರಾಬಲ್ಯ ಪ್ರದರ್ಶಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಸಹಸ್ರಾರು ಕಾರ್ಯಕರ್ತರು ಬೆನ್ನಿಗೆ ನಿಂತಿದ್ದಾರೆ ಎಂದರು.

ಇತಿಹಾಸದಲ್ಲಿ ದಾಖಲಾದ ಪಾಣಿಪತ್‌ ಕದನದಂತಿದೆ ಸದ್ಯದ ಪರಿಸ್ಥಿತಿ. ಅಂದು ರಾಜ ಶಿವಾಜಿ ನೇತೃತ್ವದಲ್ಲಿ ದೇಶದ ನಾನಾ ಕಡೆಗಳಲ್ಲಿ ನಡೆದ ಕದನದಲ್ಲಿ 131ಕ್ಕೂ ಹೆಚ್ಚು ರಾಜರ ವಿರುದ್ಧ ಗೆಲುವು ಸಾಧಿಸಿದ್ದನ್ನು ಪ್ರಸ್ತಾಪಿಸಿದ ಅಮಿತ್‌ ಶಾ, ಈ ಚುನಾವಣೆ ಮೂರನೇ ಪಾಣಿಪತ್‌ ಕದನ ಎಂದು ವಿಶ್ಲೇಷಿಸಿದರು.

ರಾಹುಲ್‌ ವಿರುದ್ಧ ವಾಗ್ದಾಳಿ:

ಕಾಂಗ್ರೆಸ್‌ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್‌ ಶಾ, ಮೋದಿ ಅವರ ವಿರುದ್ಧ ಆರೋಪ ಮಾಡುವ ರಾಹುಲ್‌ ಗಾಂಧಿ ಅವರು ಭ್ರಷ್ಟಾಚಾರ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಅಂದಹಾಗೆ, ರಾಹುಲ್‌ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಜಾಮೀನು ಸಿಗದಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ, ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೇರಲಿದೆ. ಇಡೀ ದೇಶವೇ ‘ಮಜಬೂತ್‌ ಸರ್ಕಾರ’ವನ್ನು ಬಯಸುತ್ತಿದ್ದರೆ, ವಿಪಕ್ಷ ಕಾಂಗ್ರೆಸ್‌ ನಾಯಕರು ‘ಮಜಬೂರ್‌ ಸರ್ಕಾರ’ವನ್ನು ಬಯಸುತ್ತಿದೆ ಎಂದು ಹೇಳಿದ ಅಮಿತ್‌ ಶಾ, ನರೇಂದ್ರ ಮೋದಿ ಹೊರತು ಪಡಿಸಿ ಯಾರಿಂದಲೂ ಉತ್ತಮ ಸರ್ಕಾರ ಸಾಧ್ಯವಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಅಲ್ಲದೆ, ಪಕ್ಷವನ್ನು ಇನ್ನಷ್ಟುವಿಸ್ತರಿಸಬೇಕಿದೆ ಎಂದರು.

ಬೇಸ್‌ಲೆಸ್‌ ಆರೋಪ:

ರಫೇಲ್‌ ಡೀಲ್‌ಗೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಮತ್ತು ಅವರ ಕಂಪನಿ ನಡೆಸುತ್ತಿರುವ ಆರೋಪ ನಿರಾಧಾರವಾದುದು. ಮೋದಿ ವಿರುದ್ಧ ಮಾತನಾಡದೇ ಕಾಂಗ್ರೆಸ್‌ ಚುನಾವಣೆ ಎದುರಿಸಲಾಗದು ಎಂದು ಕೆಲವರು ಅವರಿಗೆ ಸಲಹೆ ನೀಡಿರಬೇಕು ಎಂದು ಅಣಕಿಸಿದರು. ಅಲ್ಲದೆ, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ನಡುವಿನ ಮೈತ್ರಿ ಬಹಳ ದಿನಗಳ ಕಾಲ ಉಳಿಯದು ಎಂದರು.

ರಾಮಮಂದಿರ ಶತಸ್ಸಿದ್ಧ:

ತಮ್ಮ ಭಾಷಣದಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಪ್ರಸ್ತಾಪಿಸಿರುವ ಅಮಿತ್‌ ಶಾ, ಅಯೋಧ್ಯೆಯಲ್ಲಿ ಗುರುತಿಸಲಾದ ಸ್ಥಳದಲ್ಲೇ ರಾಮಮಂದಿರ ನಿರ್ಮಾಣಗೊಳ್ಳುವುದು ಶತಸಿದ್ಧ. ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ಕಾಂಗ್ರೆಸ್‌ ಅನಗತ್ಯವಾಗಿ ಪ್ರಕರಣ ಬೇಗ ಇತ್ಯರ್ಥ್ಯಗೊಳ್ಳದಂತೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ರಾಹುಲ್‌ ಗಾಂಧಿ ನಿಲುವೇನು ಎಂದೂ ಅವರು ಪ್ರಶ್ನಿಸಿದರು