ಬೆಂಗಳೂರು(ಜ.11): ಲಿಂಗಾಯತ ಸಮುದಾಯ ಉಪ ಪಂಗಡಗಳಲ್ಲಿ ವಿಭಜನೆಯಾಗಬಾರದು. ಸಮುದಾಯದಲ್ಲಿ ಒಗ್ಗಟ್ಟು ಮೂಡಿಸುವ ಮೂಲಕ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವಾಗುವಂತೆ ಶ್ರಮಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶ್ರೀ ಸಿರಸಂಗಿ ಲಿಂಗರಾಜರ ಜಯಂತ್ಯುತ್ಸವ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ‘ತ್ಯಾಗವೀರ, ಮಹಾದಾನಿ ಶ್ರೀ ಸಿರಸಂಗಿ ಲಿಂಗರಾಜರ 160ನೇ ಜಯಂತ್ಯುತ್ಸವ’ದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಶೈಕ್ಷಣಿಕ ಮತ್ತು ರಾಜಕೀಯವಾಗಿ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಹಲವು ಮುಖಂಡರು ಶ್ರಮಿಸಿದ್ದಾರೆ. ಅವರನ್ನು ಉಪ ಪಂಗಡಗಳಿಂದ ಗುರುತಿಸುವುದನ್ನು ಬಿಡಬೇಕು. ಅಂತಹ ನಾಯಕರು ಮಾಡಿರುವ ಸೇವೆ ಮತ್ತು ಆದರ್ಶಗಳನ್ನು ಇಡೀ ಲಿಂಗಾಯತರು ನೆನೆಯಬೇಕು ಎಂದರು.

ರಾಜ್ಯದಲ್ಲಿ ಶೇ.18ರಷ್ಟು ಲಿಂಗಾಯತ ಪಂಗಡದವರಿದ್ದು, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಹಿಂದುಳಿದ ವರ್ಗದ (ಒಬಿಸಿ) ಮೀಸಲಾತಿ ಪಡೆದುಕೊಳ್ಳಬೇಕು. ಒಳ-ಪಂಗಡಗಳಾಗಿ ಒಡೆದು ಹೋದಲ್ಲಿ ರಾಜ್ಯದ ರಾಜಕೀಯ ಆಡಳಿತ, ನಮ್ಮ ಮೀಸಲಾತಿ ಹೋರಾಟ ಕೈ ತಪ್ಪಲಿದೆ. ಇದಕ್ಕೆ ಅವಕಾಶ ನೀಡಬಾರದು ಎಂದರು.

ಸಿರಸಂಗಿ ಲಿಂಗರಾಜರ ಶಿಕ್ಷಣ ಸೇವೆ ಮತ್ತು ಆದರ್ಶಗಳನ್ನು ಉತ್ತರ ಕರ್ನಾಟಕಕ್ಕೆ ಸೀಮಿತಗೊಳಿಸದೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬೆಂಬಲ ನೀಡಲಿದೆ ಎಂದರು.

ಸಂಪುಟ ಸರ್ಕಸ್‌ಗೆ ತೆರೆ, ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್, ಯಾರಿಗೆ ಒಲಿಯಲಿದೆ ಮಂತ್ರಿಗಿರಿ.?

ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಲಿಂಗಾಯತ ಎಂದು ಕರೆಸಿಕೊಳ್ಳುವವರೆಲ್ಲಾ ಒಂದೇ ಆಗಿದ್ದಾರೆ. ಇನ್ನು ಮುಂದೆ ಇವರಲ್ಲಿ ಉಪ ಪಂಗಡ ಇರಬಾರದು. ಉಪ ಪಂಗಡಗಳನ್ನು ಬಿಟ್ಟು ನಾವೆಲ್ಲ ಒಂದೇ ಎಂಬ ನಿರ್ಧಾರ ಕೈಗೊಳ್ಳಬೇಕು. ಲಿಂಗರಾಜರ ಜಯಂತಿಯನ್ನು ಪ್ರತಿ ವರ್ಷ ಆಚರಿಸಲು ಟ್ರಸ್ಟ್‌ ಆರಂಭಿಸಬೇಕು. ಧಾರವಾಡದಲ್ಲಿ ಜಯಂತ್ಯುತ್ಸವ ಹಮ್ಮಿಕೊಂಡಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವೆ ಎಂದರು.

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಎಂ.ಬಿ. ಪಾಟೀಲ್‌, ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ಗದಗಿನ ಡಾ.ಸಿದ್ಧರಾಮ ಮಹಾಸ್ವಾಮೀಜಿ, ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ಇಂಡಿಯ ಸ್ವರೂಪಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ್, ಮಾಜಿ ಶಾಸಕ ಎನ್‌.ಎಸ್‌.ಖೇಡ, ಗಂಗಮ್ಮ ಈಶಣ್ಣ ಗುಳಗಣ್ಣವರ, ಸ್ವಾಗತ ಸಮಿತಿ ಅಧ್ಯಕ್ಷ ಶಂಕರ ಪಾಟೀಲ ಮತ್ತಿತರರಿದ್ದರು.