ವಾಷಿಂಗ್ಟನ್(ಡಿ.15): ಭಾರತದಲ್ಲಿ ಬಯಲು ಶೌಚದಿಂದಾಗಿಯೇ ಹೆಚ್ಚು ಅತ್ಯಾಚಾರಗಳು ನಡೆಯುತ್ತಿದೆ, ಮಹಿಳೆಯರಿಗೆ ಶೌಚಾಲಯದ ಸೌಲಭ್ಯ ನೀಡಿದಲ್ಲಿ ಅವರಿಗೆ ರಕ್ಷಣೆ ಒದಗಿಸಿದಂತಾಗುತ್ತದೆ ಎಂದು ಅಮೆರಿಕ ವಿಶ್ವವಿದ್ಯಾಲಯದ ಸಂಶೋಧಕಿ ತಿಳಿಸಿದ್ದಾರೆ.

‘‘ಮನೆಯಲ್ಲೇ ಶೌಚಾಲಯ ಬಳಸುವ ಮಹಿಳೆಯರಿಗೆ ಹೋಲಿಸಿದರೆ ಇತರೆ ಹೆಣ್ಣು ಮಕ್ಕಳು ಬಯಲು ಶೌಚಕ್ಕೆ ಹೋಗುವ ವೇಳೆ ಜೊತೆಗಾರರರಿಲ್ಲದ ಕಾರಣ ಹೆಚ್ಚಿನ ಅತ್ಯಾಚಾರ ನಡೆಯುತ್ತಿದೆ,’’ ಎಂದು ಮಿಷಿಗನ್ ಸಂಶೋಧಕಿ ಅಪೂರ್ವ ಜಾಧವ್ ತಿಳಿಸಿದ್ದಾರೆ.

 ಭಾರತ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನಿರ್ಮಲೀಕರಣ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಈ ವರದಿ ಸಲಹೆ ನೀಡಿದೆ.

ನ್ಯಾಶನಲ್ ಫ್ಯಾಮಿಲಿ ಹೆಲ್ತ್ ಸರ್ವೇಯಂತೆ ದೇಶದಾದ್ಯಂತ ಇರುವ ಸುಮಾರು 75 ಸಾವಿರ ಮಹಿಳೆಯರನ್ನು ಸಮೀಕ್ಷೆಗೊಳಪಡಿಸಿ ಮಾಹಿತಿ ಕಲೆಹಾಕಿದಾಗ, ಬಯಲು ಶೌಚದಿಂದ ಸಾಕಷ್ಟು ಲೈಂಗಿಕ ಕಿರುಕುಳ ಎದುರಿಸುತ್ತಿರುವುದಾಗಿ ಮಹಿಳೆಯರು ಸಂಶೋಧಕರೆದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರಂತೆ.