ಬೆಂಗಳೂರು :  ಈ ಬಾರಿ ಕೇರಳದ ಶಬರಿಮಲೆಗೆ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಪ್ರಥಮ ಬಾರಿಗೆ ಬೆಂಗಳೂರು- ಶಬರಿಮಲೆ ಮಾರ್ಗದಲ್ಲಿ ಕಾರ್ಯಾ ಚರಣೆ ಮಾಡುತ್ತಿರುವ ವೋಲ್ವೋ ಬಸ್ ಸೇವೆಗೆ ಅಯ್ಯಪ್ಪ ಭಕ್ತಾದಿಗಳು ಹಾಗೂ ಪ್ರಯಾಣಿಕರಿಂದ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಗಮಕ್ಕೆ ಉತ್ತಮ ಆದಾಯವೂ ಬರುತ್ತಿದೆ.

ಈ ವೋಲ್ವೋ ಬಸ್ ಸೇವೆಗೆ ಭಕ್ತಾದಿಗಳು ಹಾಗೂ ಪ್ರಯಾಣಿಕರ ಆಸಕ್ತಿ ಮತ್ತು ಬೇಡಿಕೆಯಿಂದ ಉತ್ತೇಜಿತವಾಗಿರುವ ಕೆಎಸ್ಸಾರ್ಟಿಸಿ, ಮುಂದಿನ ವರ್ಷದಿಂದ ಬೆಂಗಳೂರು-ಶಬರಿಮಲೆ ಮಾರ್ಗದಲ್ಲಿ ವೋಲ್ವೋ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಚಿಂತಿಸಿದೆ. ಕೆಎಸ್ಸಾರ್ಟಿಸಿ ಹಲವು ವರ್ಷಗಳಿಂದ ಬೆಂಗಳೂರು- ಶಬರಿಮಲೆ ಮಾರ್ಗದಲ್ಲಿ ರಾಜಹಂಸ ಮತ್ತು ಸಾಮಾನ್ಯ ಬಸ್(ಕೆಂಪು ಬಸ್) ಕಾರ್ಯಾಚರಣೆ ಮಾಡುತ್ತಿದ್ದರೂ ವೋಲ್ವೋ ಬಸ್ ಸೇವೆ ಆರಂಭಿಸಿರಲಿಲ್ಲ. 

ಈ ಬಾರಿ ಪ್ರಾಯೋಗಿಕ ಎಂಬಂತೆ ಡಿ.1ರಿಂದ  43 ಆಸನ ದ ಒಂದು ವೋಲ್ವೋ ಬಸ್ ಕಾರ್ಯಾಚರಣೆ  ಆರಂಭಿಸಿದೆ. ಹವಾನಿಯಂತ್ರಿತ ಹಾಗೂ ಸುಸಜ್ಜಿತ ಆಸನಗಳು ಸೇರಿದಂತೆ ಹಲವು ಸೌಲಭ್ಯ ಇರುವ ವೋಲ್ವೋ ಬಸ್‌ಗೆ ಅಯ್ಯಪ್ಪ ಭಕ್ತಾದಿಗಳು, ಪ್ರಯಾಣಿಕರು ಮೆಚ್ಚುಗೆ ಸೂಚಿಸಿದ್ದಾರೆ.

ಕೇರಳದ ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ಘಟ್ಟಪ್ರದೇಶಗಳು ಹೆಚ್ಚಿದ್ದು, ತಿರುವಿನ ರಸ್ತೆಗಳು ಎದುರಾಗುತ್ತವೆ. ಈ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಕಷ್ಟವಾಗುತ್ತದೆ. ಹಾಗಾಗಿ ಈ ಮಾರ್ಗದಲ್ಲಿ ವೋಲ್ವೋ ಬಸ್ ಕಾರ್ಯಾಚರಣೆ ಆರಂಭಿಸಿರಲಿಲ್ಲ. ಈ ಬಾರಿ ಧೈರ್ಯ ಮಾಡಿ ಸಿಂಗಲ್ ಆಕ್ಸೆಲ್‌ನ ಒಂದು ವೋಲ್ವೋ ಬಸ್ ಕಾರ್ಯಾಚರಣೆ ಆರಂಭಿಸಿದ್ದು, ಪ್ರಯಾಣಿಕರಿಂದ ನಿರೀಕ್ಷೆಗೂ ಮೀರಿದು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಶೇಷ ಅನುಮತಿ: ಕೇರಳ ರಾಜ್ಯ ಸಾರಿಗೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ನಡುವಿನ ಅಂತರ್ ರಾಜ್ಯ ಸಾರಿಗೆ ಒಪ್ಪಂದ ಪ್ರಕಾರ ಈ ಬಾರಿ ಶಬರಿಮಲೆ ಮಾರ್ಗದಲ್ಲಿ ಒಂದೂವರೆ ತಿಂಗಳ ಕಾಲ ಬಸ್ ಕಾರ್ಯಾಚರಣೆ ಮಾಡಲು ವಿಶೇಷ ಅನುಮತಿ ಸಿಕ್ಕಿದೆ. ಹಾಗಾಗಿ ಜ. 16ರವರೆಗೂ ವೋಲ್ವೋ ಬಸ್ ಸೇವೆ ಮುಂದುವರಿಯಲಿದೆ. ಈ ಬಸ್ ನಗರದ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಮೈಸೂರು, ಸುಲ್ತಾನ್ ಬತ್ತೇರಿ, ಕ್ಯಾಲಿಕಟ್, ತ್ರಿಶೂರು, ಕೊಟ್ಟಾಯಂ ಮಾರ್ಗದಲ್ಲಿ ಶಬರಿಮಲೆ ತಲುಪಲಿದೆ. ಮತ್ತೆ ಅದೇ ಮಾರ್ಗದಲ್ಲಿ ಬೆಂಗಳೂರು ತಲುಪಲಿದೆ.

ವರದಿ : ಮೋಹನ್ ಹಂಡ್ರಂಗಿ